ರಾಮನಗರ : ಕೇಂದ್ರ ಸರ್ಕಾರ ಒಂದು ಧರ್ಮದ ವಿರುದ್ಧ ಹಗೆ ಸಾಧಿಸುವ ಮನೋಭಾವನೆಯಿಂದ ಪೌರತ್ವ ಕಾಯ್ದೆಯನ್ನು ಜಾರಿಗೆ ತಂದಿದೆ. ಅಪ್ಪಿತಪ್ಪಿಯೂ ಸಂವಿಧಾನದ 14 ರಿಂದ 32 ನೇ ವಿಧಿಯವರೆಗೆ ಸಂಸತ್ತು ಮತ್ತು ಸುಪ್ರೀಂಕೋರ್ಟ್ ಕೂಡ ಮಧ್ಯಪ್ರವೇಶ ಮಾಡುವಂತಿಲ್ಲ ಎಂದು ಹೇಳುವ ಸಂವಿಧಾನದ ನಿಯಮ ಧಿಕ್ಕರಿಸಲಾಗಿದೆ. ಈ ಮೂಲಕ ಬಿಜೆಪಿಯ ಗೌಪ್ಯ ಪ್ರಣಾಳಿಕೆಯಂತೆ ಸರ್ಕಾರ ನಡೆಸಲು ಹೊರಟಿದ್ದಾರೆ ಎಂದು ಪ್ರದಾನಿ ಮೋದಿ ಹಾಗೂ ಕೇಂದ್ರ ಸರ್ಕಾರದ ವಿರುದ್ದ ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಸಿ.ಎಂ.ಲಿಂಗಪ್ಪ ಆರೋಪ ಮಾಡಿದ್ರು.
ನಗರದ ಕಾಂಗ್ರೆಸ್ ಜಿಲ್ಲಾ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮುಸ್ಲಿಂ ಜನಾಂಗವನ್ನ ಹೊರಗಿಡುವ ಪ್ರಯತ್ನ ಏಕೆ? ಎಂಬ ಪ್ರಶ್ನೆಗೆ ಬಿಜೆಪಿ ರಾಷ್ಟ್ರೀಯ ನಾಯಕರು ಉತ್ತರ ನೀಡಬೇಕಿದೆ. ಹೊರದೇಶ ಹಾಗೂ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಧಾರ್ಮಿಕ ನಂಬಿಕೆಗೆ ಧಕ್ಕೆ ತಂದ ಕಾರಣಕ್ಕೆ ಜೈನ, ಪಾರ್ಸಿ, ಬುದ್ದ, ಸಿಖ್ಖರು ಎಲ್ಲರಿಗೂ ಅವಕಾಶ ನೀಡುವಾಗ ಮುಸ್ಲೀಮರಿಗೆ ಏಕೆ ತಾರತಮ್ಯ? ಎಂದು ಕಿಡಿಕಾರಿದ್ರು.
ಸಂವಿಧಾನದ ಪೀಠಿಕೆ ಮತ್ತು ಮೂಲಭೂತ ಹಕ್ಕುಗಳ ಬಗ್ಗೆ ಸರ್ಕಾರಗಳು ತಿದ್ದುಪಡಿ ಮಾಡುವಂತಿಲ್ಲ. ಆದರೂ ಈ ಕಾಯ್ದೆ ತಿದ್ದುಪಡಿ ಮೂಲಕ ವಿಧಿ 14 ರ ಸ್ಪಷ್ಟ ಉಲ್ಲಂಘನೆ ಮಾಡಲಾಗಿದೆ. ಈ ಬಗ್ಗೆ ಕೆಲವರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದು, ಕೋರ್ಟ್ ನ್ಯಾಯವನ್ನು ಎತ್ತಿ ಹಿಡಿಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ರು.
ಕೇಂದ್ರದ ನಡೆ ವಿರೋಧಿಸಿ ಇದೇ 24ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ್ರು.