ರಾಮನಗರ: ಯುಪಿಎ ಸರ್ಕಾರದ ಅವಧಿಯಲ್ಲಿ ಎನ್‌ಡಿಆರ್‌ಎಫ್ ಹಾಗೂ ಎಸ್‌ಟಿಆರ್‌ಎಫ್‌ನಿಂದ 4138 ಕೋಟಿ ನೆರೆ ಪರಿಹಾರ ಸಿಕ್ಕಿದೆ, ಎನ್‌ಡಿಎ ಸರ್ಕಾರದಲ್ಲಿ 5 ವರ್ಷದಲ್ಲಿ 7200 ಕೋಟಿ ಸಿಕ್ಕಿದೆ ಎಂದು ಸಚಿವ ಸಿ.ಟಿ. ರವಿ ತಿಳಿಸಿದರು.
ರಾಮನಗರದಲ್ಲಿ ಮಾತನಾಡಿದ ಅವರು, ಅಂಕಿ ಅಂಶ ಬೇಕಾದ್ರೆ ವಿಧಾನಸೌಧದಲ್ಲೂ ಮುಂದಿಡ್ತೇವೆ, ಯಾವ ಕಾರಣಕ್ಕೂ ಪರಿಹಾರ ವಿಚಾರದಲ್ಲಿ ತಾರತಮ್ಯ ಮಾಡಲ್ಲ ಎಂದರು. ಇದೇ ವೇಳೆ ಜಾಸ್ತಿ ಹಾನಿಯಾದವರಿಗೆ 1 ಲಕ್ಷ ಕಡಿಮೆ ಹಾನಿಯಾದವರಿಗೆ 25 ಸಾವಿರದಿಂದ 50 ಸಾವಿರ ಬಿಡುಗಡೆ ಮಾಡಿದ್ದೇವೆ. ಕೆಲವರಿಗೆ ತಲುಪಿಲ್ಲ ಅಂದ್ರೇ ದಾಖಲೆಗಳ ತಪ್ಪಿನಿಂದ ಆಗಿರಬಹುದು, 100 ಕೋಟಿ ಬೆಲೆ ಬಾಳಿದ್ರು, 95000 ರೂಪಾಯಿ ಅಷ್ಟೇ ಕೇಂದ್ರ ಕೊಡುವುದು. ನಾವು ಉಳಿದ ಹಣ ಸೇರಿಸಿ 5 ಲಕ್ಷ ಕೊಡಲು ಮುಂದಾಗಿದ್ದೇವೆ ಎಂದು ಸರ್ಕಾರದ ನೆರೆ ನಿರ್ವಹಣೆಯನ್ನು ಸಮರ್ಥಿಸಿಕೊಂಡರು.
ಬಿಜೆಪಿ ಸರ್ಕಾರದಲ್ಲಿ ಸಿಎಂ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಚಿವರು, ಚುನಾವಣೆಯ ಪೂರ್ವದಲ್ಲಿಯೇ ಬಿಎಸ್ವೈ ಅವರೇ ನಮ್ಮ ಸಿಎಂ ಎಂದು ಘೋಷಣೆ ಮಾಡಿದ್ದೆವು. ಅದರಂತೆ ಬಿಎಸ್ವೈ ಸಿಎಂ ಆಗಿದ್ದಾರೆ. ಯಡಿಯೂರಪ್ಪನವರನ್ನು ನಾವು ಬಹುಮತದಿಂದ ಆಯ್ಕೆ ಮಾಡಿರಲಿಲ್ಲ, ಸರ್ವಾನುಮತದಿಂದ ಆಯ್ಕೆ ಮಾಡಿದ್ದೆವು. ಯಡಿಯೂರಪ್ಪನವರೇ 5 ವರ್ಷ ಮುಂದುವರಿಯಬೇಕೆಂಬ ಅಪೇಕ್ಷೆ ಇದೆ ಆದರೆ ಎಚ್ಚರಿಕೆ ಇರಬೇಕು, ನಾವು ಸ್ಲಿಪ್ ಆಗಬಾರದು ಎಂದರು.
ವಿಪಕ್ಷ ಸ್ಥಾನದ ಆಯ್ಕೆಯಲ್ಲಿ ಕಾಂಗ್ರೆಸ್ ಒಡೆದ ಮನೆಯಾಗಿದ್ದು, ಒಡೆದ ಮನಸ್ಸುಗಳ ಗುಂಪಾಗಿದೆ. ಸಿದ್ದರಾಮಯ್ಯ ಸರ್ವಾನುಮತದ ನಾಯಕರಾಗುವ ಸ್ಥಿತಿಯಲ್ಲಿಲ್ಲ, ಒಂದು ವೇಳೆ ಅವರೇ ವಿಪಕ್ಷ ನಾಯಕರಾದ್ರೆ ಒಂದು ಗುಂಪಿನ ನಾಯಕರಾಗುತ್ತಾರೆ ಅಷ್ಟೇ ಎಂದರು.
ಯತ್ನಾಳ್‌ಗೆ ನೋಟೀಸ್ ನೀಡಿದ್ದಕ್ಕೆ ಸಮರ್ಥನೆ
ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್‌ಗೆ ಕೇಂದ್ರದಿಂದ ನೋಟೀಸ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವ ಸಿ.ಟಿ. ರವಿ, ಪರಿಹಾರದ ಬಗ್ಗೆ ಮಾತನಾಡಿದ್ರೆ ಶೋಕಾಸ್ ನೋಟೀಸ್ ನೀಡಲ್ಲ, ಜನರ ಧ್ವನಿಯಾಗೋದಕ್ಕೆ ನಮ್ಮನ್ನ ಆರಿಸಿ ಕಳುಹಿಸಿರುವುದು. ಕೇವಲ ಪರಿಹಾರಕ್ಕೆ ಅಂತಾ ತಿಳಿದುಕೊಳ್ಳಬೇಡಿ ಅದನ್ನು ಬಿಟ್ಟು ಬೇರೆ ಬೇರೆ ಮಾತನಾಡಿದ್ದಾರೆ. ಆ ಕಾರಣವನ್ನ ಉಲ್ಲೇಖಿಸಿಯೇ ಶೋಕಾಸ್ ನೋಟೀಸ್ ಕೊಟ್ಟಿದ್ಧಾರೆ ಎಂದು ಸಮರ್ಥಿಸಿಕೊಂಡರು. ಇದೇ ವೇಳೆ ನಾನು ಕೂಡಾ ಪ್ರತಿಭಟನೆ ಮಾಡುವ ಮೊದಲನೆಯವ ಅಂತೇಳಿದ್ದೇ ನನಗೇನು ನೋಟಿಸ್ ಕೊಟ್ಟಿಲ್ಲ, ಕರ್ನಾಟಕದ ಹಿತಾಶಕ್ತಿಯನ್ನ ಬಿಟ್ಟು ನಾವು ರಾಜಕಾರಣ ಮಾಡಲ್ಲ , ದೇಶದ ಹಿತಾಶಕ್ತಿ ಇಟ್ಕೊಂಡು ರಾಜ್ಯದ ಹಿತಾಶಕ್ತಿ ಗಮನದಲ್ಲಿರಿಸಿಕೊಂಡೇ ರಾಜಕಾರಣ ಮಾಡ್ತೇವೆ ಅದನ್ನ ಬಿಟ್ಟು ಮಾತನಾಡಿರುವುದಕ್ಕೆ ಶೋಕಾಸ್ ನೋಟೀಸ್ ನೀಡಿದ್ದಾರೆ ಅಷ್ಟೇ ಎಂದರು.