ರಾಮನಗರ : ಕಾವೇರಿ ವಿವಾದ ಒಂದು ಸರ್ಕಾರಕ್ಕೆ ಸೀಮಿತವಾಗಿಲ್ಲ. ಅದು ಈ ಹಿಂದಿನ ಸಿಎಂ ಆಗಿದ್ದವರಿಗೆ ತಿಳಿದಿದೆ. ಕಾವೇರಿ ಪ್ರಾಧಿಕಾರದ ರಚನೆ ಬಳಿಕ ಅದು, ಸುಪ್ರೀಂಕೋರ್ಟ್, ಉಭಯ ರಾಜ್ಯಗಳ ಸರ್ಕಾರ, ಕೇಂದ್ರ ಸರ್ಕಾರಗಳ ಪಾಲು ಇದೆ. ಇದಕ್ಕಾಗಿ ಕಾನೂನು ಹೋರಾಟ ನಡೆಸುತ್ತಿದ್ದೇವೆ ಎಂದು ಕಾವೇರಿ ವಿಚಾರಕ್ಕೆ ಜೆಡಿಎಸ್-ಬಿಜೆಪಿ ಜಂಟಿ ಹೋರಾಟ ವಿಚಾರವಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರತಿಕ್ರಿಯೆ ನೀಡಿದ್ದಾರೆ.
ರಾಮನಗರದಲ್ಲಿ ಮಾತನಾಡಿದ ಅವರು, ಅಕ್ಟೋಬರ್ವರೆಗೂ ಅಷ್ಟೆ ನಮ್ಮಲ್ಲಿ ಮಳೆಯಾಗಬಹುದು. ಹೀಗಾಗಿ ಕನಿಷ್ಠ ಮಟ್ಟದಲ್ಲಿ ನೀರು ಬಿಡುವ ಪ್ರಯತ್ನ ನಡೆಸುತ್ತಿದ್ದೇವೆ. ವಿರೋಧ ಮಾಡುವುದೇ ವಿರೋಧ ಪಕ್ಷದ ಕೆಲಸವಾಗಿದೆ. ರಾಜಕೀಯ ಲಾಭಕ್ಕಾಗಿ ಈ ಕೆಲಸ ಮಾಡುತ್ತಿರಬಹುದು. ಆದರೆ ಇದರಲ್ಲಿ ಅವರಿಗೆ ರಾಜಕೀಯ ಪ್ರತಿಫಲ ದೊರೆಯುವುದಿಲ್ಲ. ಜನರು ಬುದ್ಧಿವಂತರಿದ್ದಾರೆ. ಅವರಿಗೆ ಎಲ್ಲವೂ ತಿಳಿದಿದೆ ಎಂದರು.
ಹಾಗೆಯೇ ಹೋರಾಟಗಾರರ ಪರವಾಗಿ ನಮ್ಮ ಸರ್ಕಾರವೂ ಇದೆ. ಜನಪರ ಹೋರಾಟ ನಡೆಯುವುದೇ ಇದರ ಮೂಲ ಉದ್ದೇಶವಾಗಿರಲಿ. ಕಾನೂನಿನ ಪ್ರಕಾರ ಯಾವ ಬಂದ್ ಅನ್ನು ಮಾಡುವಂತಿಲ್ಲ. ಜನಪರ ಹೋರಾಟವಾಗಿದ್ದರಿಂದ ಶಾಂತಿಯುತ ಹೋರಾಟ ನಡೆಯಬೇಕು. ತಮಿಳುನಾಡಿನ ಬೇಡಿಕೆಯನ್ನೂ ಸಹ ನಿರ್ವಹಣಾ ಪ್ರಾಧಿಕಾರ ಈಡೇರಿಸಿಲ್ಲ. ಪ್ರಾಧಿಕಾರ ಬೇಡಿಕೆಗಿಂತ ಕಡಿಮೆ ನೀರು ಬಿಡಲು ಹೇಳಿರುವುದು ನಮಗೂ ಒಳ್ಳೆಯದೇ ಆಗಿದೆ. ಹೀಗಾಗಿ ಈ ಸಂದರ್ಭದಲ್ಲಿ ಸೂಕ್ಷ್ಮವಾಗಿ ನಡೆಯಬೇಕಿದೆ ಎಂದು ಹೇಳಿದರು.
ನಮ್ಮ ಸಲಹೆ ಸ್ವೀಕರಿಸಿದ್ರೆ ನೀರು ಉಳಿಯುತ್ತಿತ್ತು ಎಂಬ ಹೆಚ್ಡಿಕೆ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಇದರಲ್ಲಿ ಯಾವುದೇ ಗಾಂಭೀರ್ಯತೆ ಇಲ್ಲ. ಜನರ ಒಳಿತಿಗೆ ಅವರೇ ಸಲಹೆ ನೀಡಬಹುದಿತ್ತು. ಅದನ್ನು ನಾವೇ ಕೇಳಬೇಕಿತ್ತಾ? ಅವರು ಮಾಧ್ಯಮಕ್ಕೆ ಸುಮ್ಮನೆ ಹೇಳಿಕೆ ನೀಡುತ್ತಿದ್ದಾರೆ. ರಾಜಕೀಯ ಹೇಳಿಕೆಗೆ ಅದನ್ನ ಬಳಸಿಕೊಳ್ಳಬಾರದು. ಕಾವೇರಿ ವಿಚಾರದಲ್ಲಿ ಎಲ್ಲರದ್ದೂ ಪಾತ್ರ ಇದೆ ಎಂದು ಹೆಚ್ಡಿಕೆ ಗೆ ದಿನೇಶ್ ಗುಂಡೂರಾವ್ ಇದೇ ವೇಳೆ ಟಾಂಗ್ ಕೊಟ್ಟರು.
ಕಾವೇರಿ ವಿಚಾರದಲ್ಲಿ ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡಬೇಕು. ನಮ್ಮ ಭೇಟಿಗೂ ಅವರು ಅವಕಾಶ ನೀಡಿಲ್ಲ. ದೆಹಲಿಗೆ ಹೋದ್ರೂ ಸಮಯ ನಿಗದಿ ಪಡಿಸುತ್ತಿಲ್ಲ. ನಮ್ಮ ರಾಜ್ಯದ ಸಂಸದರು ಏನೂ ಮಾಡುತ್ತಿಲ್ಲ. ಕೇವಲ ರಾಜಕೀಯ ಹೇಳಿಕೆ ಕೊಡ್ತಾ ಕುಳಿತಿದ್ದಾರೆ ಎಂದರು.
ಲೋಕಸಭಾ ಚುನಾವಣೆಗೆ ಜೆಡಿಎಸ್-ಬಿಜೆಪಿ ಮೈತ್ರಿ ವಿಚಾರವಾಗಿ ಮಾತನಾಡಿದ ಅವರು, ನಾವು ಹಿಂದೆ ಮೈತ್ರಿ ಮಾಡಿ ಅನುಭವಿಸಿದ್ದೇವೆ. ನಮಗೆ ಆ ಮೈತ್ರಿ ಬೇಡ ಅಂತ ದೂರ ಉಳಿದಿದ್ದೇವೆ. ಹಿಂದೆ ಮೈತ್ರಿಯ ಕಹಿ ಅನುಭವ ನೋಡಿದ್ದೇವೆ. ಈಗ ಮೈತ್ರಿ ಮಾಡಿಕೊಂಡಿರುವವರು ಅನುಭವಿಸಲಿದ್ದಾರೆ. ಈ ಮೈತ್ರಿ ಜೆಡಿಎಸ್ ಪಕ್ಷದ ಕೊನೆ ಹಂತ ಎನ್ನಬಹುದು ಎಂದು ಬಿಜೆಪಿ-ಜೆಡಿಎಸ್ ಮೈತ್ರಿ ಬಗ್ಗೆ ಸಚಿವ ದಿನೇಶ್ ಗುಂಡೂರಾವ್ ಲೇವಡಿ ಮಾಡಿದರು.
ಸ್ವಚ್ಛ ಆಸ್ಪತ್ರೆಗೆ ಚಾಲನೆ ನೀಡಿದ ಸಚಿವರು - ರಾಮನಗರ ಜಿಲ್ಲಾಸ್ಪತ್ರೆಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಭೇಟಿ ನೀಡಿ, ಸ್ವಚ್ಛ ಆಸ್ಪತ್ರೆ ನಮ್ಮ ಆದ್ಯತೆ ಅಭಿಯಾನಕ್ಕೆ ಚಾಲನೆ ಕೊಟ್ಟರು. ಆಸ್ಪತ್ರೆಯ ಸ್ವಚ್ಛತೆ ಹಾಗೂ ಸಿಬ್ಬಂದಿ ಕುರಿತು ಮಾಹಿತಿ ಸಂಗ್ರಹಿಸಿದರು. ಇದೇ ವೇಳೆ ಮಾತನಾಡಿದ ಸಚಿವರು, ಆಸ್ಪತ್ರೆ ಸ್ವಚ್ಛತೆ ಬಗ್ಗೆ ಪರಿಶೀಲನೆ ನಡೆಸಿದ್ದೇವೆ. ನೈರ್ಮಲ್ಯ ಉದ್ದೇಶ ನಮ್ಮದು. ಆಸ್ಪತ್ರೆ ಜನರಿಗೆ ಇರುಸುಮುರುಸು ಉಂಟು ಮಾಡಬಾರದು. ಹಳೆ ಪರಿಕರಗಳನ್ನು ಸರಿಪಡಿಸುವ ಕೆಲಸ ನಮ್ಮದಾಗಿದೆ. ಆಸ್ಪತ್ರೆಯ ತ್ಯಾಜ್ಯ ವಿಲೇವಾರಿ ಬಗ್ಗೆಯೂ ಕಾಳಜಿ ವಹಿಸಿದ್ದೇವೆ ಎಂದರು.
ಹಾಗೆಯೇ ಜಿಲ್ಲಾಸ್ಪತ್ರೆಯಲ್ಲಿ ವೈದ್ಯರು, ಸಿಬ್ಬಂದಿ ಕೊರತೆ ವಿಚಾರವಾಗಿ ಮಾತನಾಡಿದ ಸಚಿವರು, ತಜ್ಞ ವೈದ್ಯರು, ಶುಶ್ರೂಷ ಅಧಿಕಾರಿಗಳ, ಗ್ರೂಪ್ ಡಿ, ನರ್ಸ್ಗಳ ಕೊರತೆ ಇದೆ. ಇಲ್ಲಿ ಆಸ್ಪತ್ರೆ ದೊಡ್ಡದಿದ್ದರೂ, ಸಿಬ್ಬಂದಿಗಳಿಲ್ಲ. ಹೀಗಾಗಿ ಸಂಜೆ ಸಭೆ ನಡೆಸಲಾಗುವುದು. ಕಡ್ಡಾಯ ಗ್ರಾಮೀಣ ಸೇವೆಯಲ್ಲಿನ ವೈದ್ಯರನ್ನು ಸೇವೆಗೆ ನೇಮಕ ಮಾಡಿಕೊಳ್ಳಲಾಗುವುದು. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿಯೂ ಸಿಬ್ಬಂದಿ ಕೊರತೆ ಇದೆ. ಇದರಿಂದ ಸೇವೆಗಳು ವ್ಯತ್ಯಯಗೊಂಡಿವೆ. ಹೀಗಾಗಿ ಈ ಎಲ್ಲ ಸಮಸ್ಯೆಗಳನ್ನು ಪರಿಹರಿಸುವ ಪ್ರಾಮಾಣಿಕ ಕೆಲಸ ಮಾಡಲಾಗುವುದು ಎಂದು ಇದೇ ವೇಳೆ ಸಚಿವರು ತಿಳಿಸಿದರು.
ಇದನ್ನೂ ಓದಿ: ಆಧ್ಯಾತ್ಮದ ಮೂಲಕ ನಿಸ್ವಾರ್ಥ ಸೇವಾ ಮನೋಭಾವವನ್ನು ಬೆಳೆಸಬೇಕಿದೆ : ಸಚಿವ ದಿನೇಶ್ ಗುಂಡೂರಾವ್....