ರಾಮನಗರ : ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆಯಾದ ಹಿನ್ನೆಲೆಯಲ್ಲಿ ರೇಷ್ಮೆ ನಗರಿ ರಾಮನಗರ ಜಿಲ್ಲೆಯಲ್ಲೂ ಪೊಲೀಸರು ಹೈ ಅಲರ್ಟ್ ಘೋಷಿಸಿದ್ದಾರೆ.
ನಗರದ ಬಸ್ ನಿಲ್ದಾಣ ಸೇರಿದಂತೆ ಆಯಕಟ್ಟಿನ ಜಾಗದಲ್ಲಿ ಬಾಂಬ್ ಪತ್ತೆ ದಳದಿಂದ ಶೋಧ ಕಾರ್ಯ ನಡೆದಿದೆ. ಜಿಲ್ಲೆಯ ನಾಲ್ಕು ತಾಲೂಕುಗಳಿಗೂ ಭೇಟಿ ನೀಡಿರುವ ಬಾಂಬ್ ಪತ್ತೆದಳದ ಸಿಬ್ಬಂದಿ ರಾಮನಗರ, ಚನ್ನಪಟ್ಟಣ, ಮಾಗಡಿ ಹಾಗೂ ಕನಕಪುರದಲ್ಲೂ ಶೋಧ ಕಾರ್ಯ ನಡೆಸಿದ್ದಾರೆ.
ನಗರದ ಪ್ರಮುಖ ಜಾಗಗಳಾದ ರೈಲು ನಿಲ್ದಾಣ ಹಾಗೂ ಬಸ್ ನಿಲ್ದಾಣ ಸೇರಿದಂತೆ ವಿವಿಧ ಆಯಕಟ್ಟಿನ ಜಾಗಗಳಲ್ಲಿ ಪರಿಶೀಲನೆ ನಡೆಸುತ್ತಿರುವ ಸಿಬ್ಬಂದಿ ಬಾಂಬ್ ಪತ್ತೆಗಾಗಿ ಶೋಧಕಾರ್ಯ ನಡೆಸಿದರು. ಈ ಹಿಂದೆ ರಾಮನಗರದಲ್ಲಿ ಮೂವರು ಉಗ್ರರನ್ನ ಬಂಧಿಸಿದ್ದ ಹಿನ್ನೆಲೆಯಲ್ಲಿ ಹೈ ಅಲರ್ಟ್ ಘೋಷಣೆಯಾಗಿದ್ದು ಪೊಲೀಸ್ ಇಲಾಖೆ ತೀರ್ವ ಕಟ್ಟೆಚ್ಚರ ವಹಿಸಿದೆ.