ರಾಮನಗರ: ಬಿಟ್ ಕಾಯಿನ್ ಹಗರಣದ(Bitcoin Scam) ಬಗ್ಗೆ ತನಿಖೆ ನಡೆಸಲು ನಮ್ಮ ಸರ್ಕಾರ ಸಿದ್ಧವಿದೆ. ಈಗಾಗಲೇ ಕೇಂದ್ರ ತನಿಖಾ ಏಜೆನ್ಸಿಗಳ ಮೂಲಕ ತನಿಖೆ ಮಾಡಿಸಲು ಸಿಎಂ ಬಸವರಾಜ ಬೊಮ್ಮಾಯಿ ಅವರು ಸಿದ್ಧರಿದ್ದಾರೆ ಎಂದು ಸಚಿವ ಉತನ್ನ ಶಿಕ್ಷಣ ಸಚಿವ ಅಶ್ವತ್ಥ್ ನಾರಾಯಣ ಹೇಳಿದ್ದಾರೆ.
ರಾಮನಗರ ಜಿಲ್ಲೆ ಮಾಗಡಿಯಲ್ಲಿ ಮಾತನಾಡಿದ ಅವರು, ಪ್ರತಿಪಕ್ಷದವರು ಏನಾದರೂ ಸಾಕ್ಷಿ ಇದ್ದರೆ ಮಂಡಿಸಲಿ, ಪುರಾವೆ ಇದ್ದರೆ ಹಂಚಿಕೊಳ್ಳಲಿ, ಸರ್ಕಾರಕ್ಕೂ ಕೊಡಿ ಎಂದು ಮನವಿ ಮಾಡಿದರು.
ಬಿಟ್ ಕಾಯಿನ್ ಪ್ರಕರಣದ ವಿಚಾರಣೆ ನಡೆಯಬೇಕಾದರೆ ಏನು ಹೇಳಲು ಸಾಧ್ಯ?. ಅವರು ಅಧಿಕಾರದಲ್ಲಿ ಇದ್ದರೂ ಆಗ ಪ್ರಕರಣಗಳ ತನಿಖೆ ನಡೆಯಬೇಕಾದರೆ ಯಾವ್ಯಾವ ಮಾಹಿತಿ ಹೇಳಿದ್ದಾರೋ ಅದನ್ನೆಲ್ಲಾ ಹೇಳಬೇಕು. ಅರ್ಕಾವತಿ ವಿಚಾರದಲ್ಲಿ ಕೆಂಪಣ್ಣ ಆಯೋಗದ ತನಿಖೆ ಬಗ್ಗೆ ಏನಾದರೂ ಹೇಳಿದ್ರಾ? ಪಬ್ಲಿಕ್ ಪ್ರಾಸಿಕ್ಯೂಟರ್ ನೇಮಕದಲ್ಲಿ ಉಲ್ಲಂಘನೆಯಾಗಿತ್ತು. ಅದರ ಬಗ್ಗೆ ಏನಾದರೂ ಹೇಳಿದ್ರಾ? ನಮ್ಮ ಪ್ರತಿಪಕ್ಷದ ನಾಯಕರ ಮೇಲೆ ಹಲವು ಆರೋಪಗಳಿವೆ. ಇದಲ್ಲದೆ ಕೆಪಿಸಿಸಿ ಅಧ್ಯಕ್ಷರ ಮೇಲೆ ಹಲವಾರು ಆಪಾದನೆ ಇವೆ. ಹಿಟ್ ಅಂಡ್ ರನ್ ರೀತಿ ಬೇಡ, ಪುರಾವೆ ಇದ್ದರೆ ಮಂಡಸಲಿ ಎಂದು ಸಚಿವರು ಹೇಳಿದರು.
'ಸಿಎಂ ಬದಲಾವಣೆ ಇಲ್ಲ'
ಬಿಟ್ ಕಾಯಿನ್ ವಿಚಾರದಲ್ಲಿ ಸಿಎಂ ಬದಲಾವಣೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಈ ರೀತಿಯ ಬೆಳವಣಿಗೆ ಯಾವುದು ಇಲ್ಲ, ಯಾವುದು ಸತ್ಯ ಅಲ್ಲ. ಸಿಎಂ-ಪಿಎಂ ಭೇಟಿ ವಿಚಾರ ಬೇರೆ ಕಾರಣಗಳಿವೆ. ಕೆಲ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಚರ್ಚೆ ಮಾಡಲು ಭೇಟಿ ಮಾಡ್ತಿದ್ದಾರೆ. ಪ್ರತಿಪಕ್ಷದವರ ಎಲ್ಲಾ ಟೀಕೆಗೆ ಎಲ್ಲಾ ತಿರುಗೇಟು ಕೊಡ್ತೇವೆ. ಅವರಿಗೆ ಕನ್ನಡಿ ಇಡಿಯುವಂತಹ ಕೆಲಸ ಮಾಡ್ತೇವೆ. ಅವರ ಘನಸಾಧನೆಗಳನ್ನು ಬಹಳಷ್ಟು ಪರಿಣಾಮಕಾರಿಯಾಗಿ ತಿಳಿಸುವ ಕೆಲಸ ಮಾಡ್ತೇವೆ ಎಂದರು.
ಯಾವುದೇ ಪ್ರಕರಣದಲ್ಲಿ ಮುಚ್ಚುಮರೆ ಮಾಡುವುದು ಯಾವುದೂ ಇಲ್ಲ. ಎಲ್ಲಾ ರೀತಿಯ ತನಿಖೆಗೆ ನಾವು ಸಿದ್ಧರಿದ್ದೇವೆ. ಕಾನೂನು ಉಲ್ಲಂಘನೆ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಮುಂದೆಯೂ ಸಹ ಅಂತಹವರ ವಿರುದ್ಧ ಕಾನೂನಿನ ಕ್ರಮವಹಿಸಲಾಗುತ್ತದೆ ಎಂದು ಇದೇ ವೇಳೆ ಡಾ. ಅಶ್ವತ್ಥ್ ನಾರಾಯಣ್ ತಿಳಿಸಿದರು.