ರಾಮನಗರ : ಕಿಡಿಗೇಡಿಗಳ ದುಷ್ಕೃತ್ಯಕ್ಕೆ 15 ಲಕ್ಷ ರೂಪಾಯಿ ಮೌಲ್ಯದ ಬಾಳೆ ಮತ್ತು ಮಾವಿನ ಗಿಡಗಳು ನಾಶವಾಗಿರುವ ಘಟನೆ ತಾಲ್ಲೂಕಿನ ಸಾತನೂರು ಹೋಬಳಿಯ ಗೇರಹಳ್ಳಿ ಗ್ರಾಮದಲ್ಲಿ ನಡೆದಿದೆ.
ಜಿಲ್ಲೆಯ ಕನಕಪುರ ಗೇರಹಳ್ಳಿ ಗ್ರಾಮದ ರೈತ ಚಿಕ್ಕಪುಟ್ಟೇಗೌಡ ತನ್ನ 6 ಎಕರೆ ಜಮೀನಲ್ಲಿ ಬಾಳೆ ಮತ್ತು ಮಾವಿನ ಗಿಡಗಳನ್ನು ಬೆಳೆದಿದ್ದರು. ಬಾಳೆ ಫಸಲು ಕೈಗೆ ಬಂದಿತ್ತು, ಆದರೆ ವಯಕ್ತಿಕ ದ್ವೇಷಕ್ಕೆ ಕಿಡಗೇಡಿಗಳು ಸಂಪೂರ್ಣ ಬಾಳೆ ಗಿಡಗಳು ಮತ್ತು ಮಾವಿನ ಗಿಡಗಳನ್ನ ಕಡಿದು ನಾಶಮಾಡಿದ್ದಾರೆ. ಇದರಿಂದಾಗಿ ರೈತನಿಗೆ ಸುಮಾರು 15 ಲಕ್ಷ ರೂಪಾಯಿಗೂ ಅಧಿಕ ನಷ್ಟ ಸಂಭವಿಸಿ, ಕೈಗೆ ಬಂದ ಫಸಲು ಬಾಯಿಗೆ ಬರುವಷ್ಟರಲ್ಲಿ ಮಣ್ಣು ಪಾಲಾಗಿದೆ.
ಆರು ಎಕರೆ ಪ್ರದೇಶದಲ್ಲಿ ಸುಮಾರು 1100 ಬಾಳೆ ಗಿಡ ಮತ್ತು 300 ಮಾವಿನ ಗಿಡಗಳನ್ನ ಬೆಳೆಸಲಾಗಿತ್ತು ಅವೆಲ್ಲವೂ ನೆಲಸಮವಾಗಿವೆ. ಇನ್ನು ಕೆಲವೇ ದಿನಗಳಲ್ಲಿ ಬಾಳೆಗೊನೆ ಕಟಾವು ಮಾಡಬೇಕಿತ್ತು, ಬಾಳೆ ಫಸಲಿನಿಂದ ಸುಮಾರು 15 ಲಕ್ಷ ರೂಪಾಯಿ ಲಾಭದ ನಿರೀಕ್ಷೆಯಲ್ಲಿ ಚಿಕ್ಕಪುಟ್ಟೇಗೌಡ ಇದ್ದರು. ಬಾಳೆ ಜೊತೆಗೆ 300 ಮಾವಿನ ಗಿಡಗಳನ್ನು ಮೂರು ವರ್ಷಗಳಿಂದ ಬೆಳೆಸಿದ್ದು, ಮಾವಿನ ಫಸಲಿನಿಂದ 5 ಲಕ್ಷ ರೂಪಾಯಿ ನಷ್ಟವಾಗಿದೆ ಎಂದು ರೈತನ ಮಗ ಅನಿಲ್ ದುಖಃ ತೊಡಿಕೊಂಡರು.
ಗ್ರಾಮದಿಂದ 3 ಕೀಮಿ ದೂರದಲ್ಲಿ ಘಟನಾ ಸ್ಥಳವಿದ್ದ ಕಾರಣ ಕಿಡಿಗೇಡಿಗಳ ಕೃತ್ಯ ತಕ್ಷಣ ಯಾರ ಗಮನಕ್ಕೂ ಬಂದಿಲ್ಲ, ಇನ್ನು ಸಾತನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣ ದಾಖಲಿಸಿಕೊಂಡ ಪೋಲೀಸರು ತನಿಖೆ ಕೈಗೊಂಡಿದ್ದಾರೆ. ಸ್ಥಳಕ್ಕೆ ಶ್ವಾನದಳ ಕರೆಸಿ ತಪಾಸಣೆ ನಡೆಸಿದ್ದು ಶ್ವಾನ ಜಮೀನಿಂದ ಅರ್ಧ ಮೈಲಿ ದೂರ ಸುತ್ತಾಡಿದಿದ್ದು ಯಾವುದೇ ಸುಳಿವು ಸಿಕ್ಕಿಲ್ಲ.
ಇನ್ನೂ ಬೆಳೆ ಕಳೆದುಕೊಂಡ ರೈತ ಚಿಕ್ಕಪುಟ್ಟೇಗೌಡ ಪೊಲೀಸರಿಗೆ ನೀಡಿರುವ ತಮ್ಮ ದೂರಿನಲ್ಲಿ ಗ್ರಾಮದ ಕೆಲವರ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ. ಈ ನಿಟ್ಟಿನಲ್ಲಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.