ರಾಮನಗರ: ಚನ್ನಪಟ್ಟಣ ನಗರದ ಬಮೂಲ್(ಬೆಂಗಳೂರು ಹಾಲು ಉತ್ಪಾದಕರ ಒಕ್ಕೂಟ) ಶಿಬಿರ ಕಚೇರಿಯಲ್ಲಿ ಜೆಡಿಎಸ್ನ ಬಮೂಲ್ ನಿರ್ದೇಶಕ ಹೆಚ್.ಸಿ ಜಯಮುತ್ತು ಹಾಗೂ ಸರ್ಕಾರ ನಿರ್ದೇಶಿತ ನಿರ್ದೇಶಕ ಎಸ್ ಲಿಂಗೇಶ್ ಕುಮಾರ್ ನಡುವೆ ಗಲಾಟೆ ನಡೆದಿದ್ದು ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿತ್ತು. ರಾಜ್ಯ ಸರ್ಕಾರ ಇತ್ತೀಚೆಗೆ ಲಿಂಗೇಶ್ ಕುಮಾರ್ ಅವರನ್ನು ಬಮೂಲ್ ನಿರ್ದೇಶಕರಾಗಿ ಆಯ್ಕೆ ಮಾಡಿತ್ತು.
ನೂತನ ನಿರ್ದೇಶಕ ಎಸ್ ಲಿಂಗೇಶ್ ಕುಮಾರ್ ಬಮೂಲ್ ಶಿಬಿರ ಕಚೇರಿಯಲ್ಲಿ ಪೂಜೆ ಸಲ್ಲಿಸಲು ಮುಂದಾದಗ ಹೆಚ್.ಸಿ ಜಯಮುತ್ತು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆ ಕಚೇರಿಯ ಒಳಗೆ ಹಾಗೂ ಹೊರಭಾಗದಲ್ಲಿ ಬಿಜೆಪಿ ಮತ್ತು ಜೆಡಿಎಸ್ನ ಪಕ್ಷದ ಮುಖಂಡರು, ಕಾರ್ಯಕರ್ತರ ನಡುವೆ ಮಾತಿನ ಚಕಮಕಿ, ತಳ್ಳಾಟ, ನೂಕಾಟ ನಡೆದು ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದ್ದ ಗಲಾಟೆಯನ್ನು ಪೊಲೀಸರು ಮಧ್ಯಪ್ರವೇಶಿಸಿ ತಿಳಿಗೊಳಿಸಿದರು.
ಇನ್ನು ಗಲಾಟೆ ವಿಚಾರವಾಗಿ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಪ್ರತಿಕ್ರಿಯೆ ನೀಡಿ, ಲಿಂಗೇಶ್ ಅವರು ನಾಮನಿರ್ದೇಶನರಾಗಿದ್ದಾರೆ. ಅವರಿಗೆ ಹಕ್ಕಿದೆ ಅದಕ್ಕಾಗಿ ಕಚೇರಿಗೆ ಬಂದಿದ್ದಾರೆ. ಜಯಮುತ್ತು ಅವರಿಗೆ ಗೌರವ ಇದ್ದಿದ್ದರೆ ಲಿಂಗೇಶ್ ಅವರನ್ನು ಸ್ವಾಗತ ಮಾಡಬೇಕಿತ್ತು. ಬಮೂಲ್ ಪ್ರೈವೇಟ್ ಲಿಮಿಟೆಡ್ ಕಂಪನಿ ಅಲ್ಲ. ಅವರ ಅಧಿಕಾರವನ್ನ ಮೊಟಕು ಮಾಡುವುದು ತಪ್ಪು. ಜಯಮುತ್ತು ಅವರದು ಇತ್ತೀಚಿನ ದಿನಗಳಲ್ಲಿ ದೌರ್ಜನ್ಯ, ದಬ್ಬಾಳಿಕೆ ಜಾಸ್ತಿ ಆಗ್ತಿದೆ ಎಂದು ಹೇಳಿದರು. ಈ ವಿಚಾರ ಹೆಚ್ಡಿ ಕುಮಾರಸ್ವಾಮಿ ಅವರ ಗಮನಕ್ಕೆ ಬಂದಿದೆಯೋ ಗೊತ್ತಿಲ್ಲ. ಆದರೆ ಜೆಡಿಎಸ್ಗೆ ಜಯಮುತ್ತು ಮುಳುವಾಗಿದ್ದಾರೆ. ಕುಮಾರಸ್ವಾಮಿಗೆ ಕೇಳಬೇಕು, ಕುಮ್ಮಕ್ಕು ಕೊಟ್ಟಿದ್ದಾರೋ ಇಲ್ಲವೋ ಎಂದು ಪ್ರಶ್ನಿಸಿದರು.
ಬಮೂಲ್ ಉತ್ಸವ ತಡೆ ಕೋರಿದ ವಿಚಾರವಾಗಿ ಮಾತನಾಡಿ, ಬಮೂಲ್ ಉತ್ಸವ ತಡೆಯುವುದಕ್ಕೆ ನಾವು ಪತ್ರ ಬರೆದಿಲ್ಲ. ಬಮೂಲ್ ಟ್ರಸ್ಟ್ನಲ್ಲಿರುವ ಹಣ ದುರುಪಯೋಗ ಆಗುತ್ತಿದೆ. ಹಾಗಾಗಿ ನಾನು ಸಹಕಾರಿ ಮಂತ್ರಿಯ ಗಮನ ಸೆಳೆಯುತ್ತಿದ್ದೇನೆ. ಬಮೂಲ್ ಉತ್ಸವ ಅಂದರೆ ರೈತರ ಮಕ್ಕಳ ಕ್ಷೇಮಾಭಿವೃದ್ಧಿಗೆ ಹಣವನ್ನು ಬಳಸಬೇಕು. ಆದರೆ, ಇಲ್ಲಿ ಆ ಕೆಲಸವಾಗುತ್ತಿಲ್ಲ. ಆದ ಕಾರಣ ಹಣದ ದುರುಪಯೋಗ ಆಗಬಾರದೆಂದು ಸರ್ಕಾರಕ್ಕೆ ಪತ್ರ ಬರೆದಿದ್ದೇನೆ ಎಂದು ಸ್ಪಷ್ಟನೆ ನೀಡಿದರು.
ಬಮೂಲ್ ನಿರ್ದೇಶಕ ಜಯ ಮುತ್ತು ಹೇಳಿದ್ದು ಏನು?: ಇನ್ನು ಇದೇ ವಿಚಾರಕ್ಕೆ ಜೆಡಿಎಸ್ನ ಬಮೂಲ್ ನಿರ್ದೇಶಕ ಜಯಮುತ್ತು ಪ್ರತಿಕ್ರಿಯಿಸಿ, ಮುಂದಿನ ತಿಂಗಳು 27ನೇ ತಾರೀಖಿನಂದು ಬಮೂಲ್ ಉತ್ಸವ ಏರ್ಪಡಿಸಲಾಗಿದೆ. ಸುಮಾರು 20 ರಿಂದ 25 ಸಾವಿರ ಜನ ರೈತರು ಉತ್ಸವದಲ್ಲಿ ಭಾಗಿಯಾಗಲಿದ್ದಾರೆ. ಬಂದಂತಹ ರೈತರಿಗೆ 10 ಲೀಟರ್ನ ಹಾಲಿನ ಕ್ಯಾನ್ ಕೂಡ ವಿತರಿಸಬೇಕು ಎಂದು ತೀರ್ಮಾನಿಸಲಾಗಿದೆ. ಇದನ್ನು ಸಹಿಸಲಾಗದೇ ಕಾರ್ಯಕ್ರಮ ನಡೆಯಬಾರದೆಂದು ಜಯಮುತ್ತು ಮತ್ತು ಸಿಪಿ ಯೋಗೇಶ್ವರ್ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಇದೇ ಉದ್ದೇಶದಿಂದ ಗಲಾಟೆ ಮಾಡಲು ಬಂದಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ: ಕಾಂಗ್ರೆಸ್ ಸುಳ್ಳಿನ ಗೋಪುರ ಕಟ್ಟಿದೆ: ಅಭಿವೃದ್ಧಿಗಾಗಿ ಜನರೇ ಬಿಜೆಪಿ ಆಯ್ಕೆ ಮಾಡ್ತಾರೆ: ಅರುಣ್ ಸಿಂಗ್