ರಾಮನಗರ: ಪರಿಸರದ ಕಾಳಜಿ ನಮ್ಮ ಆಯ್ಕೆಯಲ್ಲ, ನಮ್ಮ ಕರ್ತವ್ಯವಾಗಿದೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ಇನ್ನಷ್ಟು ಭೀಕರವಾಗಲಿದೆ ಎಂದು ಚಿತ್ರ ನಟಿ ರಾಧಿಕಾ ನಾರಾಯಣ ಅಭಿಪ್ರಾಯಪಟ್ಟರು.
ಬಿಡದಿ ಬಳಿಯ ವಂಡರ್‌ಲಾ ಮನೋರಂಜನಾ ಪಾರ್ಕ್‌ನಲ್ಲಿ ನಡೆದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಬ್ಬರು ಪರಿಸರ ಕಾಳಜಿ ಪ್ರಜ್ಞೆ ಬೆಳೆಸಿಕೊಳ್ಳಬೇಕು ಎಂದರು.
ವಂಡರ್‌ಲಾ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಜಾರ್ಜ್ ಜೋಸೆಫ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಪರಿಸರದ ಸಮತೋಲನದಲ್ಲಿ ಏರುಪೇರಾಗುತ್ತಿರುವುದು ಆತಂಕಕಾರಿ ಸಂಗತಿ. ಇನ್ನಾದರೂ ನಾವು ಅದರ ಸಂರಕ್ಷಣೆಯತ್ತ ಗಮನ ಹರಿಸಬೇಕಿದೆ ಎಂದರು. ಈ ಸಾಲಿನ ಪ್ರಶಸ್ತಿಗೆ 200ಕ್ಕೂ ಹೆಚ್ಚು ಶಾಲೆಗಳಿಂದ ಅರ್ಜಿಗಳು ಬಂದಿದ್ದವು. ಅದರಲ್ಲಿ 85 ಶಾಲೆಗಳನ್ನು ಅಂತಿಮ ಸುತ್ತಿಗೆ ಆಯ್ಕೆ ಮಾಡಲಾಗಿತ್ತು ಎಂದು ಮಾಹಿತಿ ನೀಡಿದರು.
ಇನ್ನು ಹೊಸೂರಿನ ಮಹರ್ಷಿ ವಿದ್ಯಾಮಂದಿರ ಹಿರಿಯ ಪ್ರಾಥಮಿಕ ಶಾಲೆಯು, 2019-20ನೇ ಸಾಲಿನ ವಂಡರ್‌ಲಾ ಪರಿಸರ ಮತ್ತು ಇಂಧನ ಸಂರಕ್ಷಣೆ ಅಗ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಮಹರ್ಷಿ ಶಾಲೆಯು ಮೊದಲ ಬಹುಮಾನವಾಗಿ ₹ 50 ಸಾವಿರ ಹಾಗೂ ಟ್ರೋಫಿಯನ್ನು ಪಡೆಯಿತು. ಸಾತನೂರಿನ ದೆಹಲಿ ಪಬ್ಲಿಕ್ ಶಾಲೆ ಹಾಗೂ ಬೆಂಗಳೂರಿನ ಧರ್ಮರಾಮ್ ಕಾಲೇಜು ಕ್ರೈಸ್ತ್ ಶಾಲೆಯು ದ್ವಿತೀಯ ಬಹುಮಾನವಾಗಿ ತಲಾ ₹ 25 ಸಾವಿರ ನಗದು ಹಾಗೂ ಪ್ರಶಸ್ತಿ ಫಲಕ ಸ್ವೀಕರಿಸಿದವು. ಕೊಡಗಿನ ಕೂರ್ಗ್ ಪಬ್ಲಿಕ್ ಶಾಲೆ, ಶಿವಮೊಗ್ಗದ ಹಾವಳ್ಳಿಯ ಜ್ಞಾನದೀಪ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಮಾರತಹಳ್ಳಿಯ ವಾಗ್ದೇವಿ ವಿಲಾಸ ಶಾಲೆ ತಂಡಗಳು ಮೂರನೇ ಬಹುಮಾನ ಹಂಚಿಕೊಂಡಿದ್ದು, ಈ ಶಾಲೆಗಳಿಗೆ ತಲಾ 15 ಸಾವಿರ ನಗದು ಬಹುಮಾನ ನೀಡಲಾಯಿತು.
ಪರಿಸರ ಸಂರಕ್ಷಣೆಗೆ ಶ್ರಮಿಸಿದ ಶಿಕ್ಷಕರಿಗೂ ಪ್ರಶಸ್ತಿ ನೀಡಲಾಯಿತು. ದಕ್ಷಿಣ ಕನ್ನಡ ಜಿಲ್ಲೆಯ ಡಿಕೆಝಡ್‌ಪಿಎಂಎಚ್‌ಪಿ ಶಾಲೆಯ ಭಾಸ್ಕರ್ ನಾಯಕ್ ಮೊದಲ, ಸತ್ಯಸಾಯಿ ಲೋಕ ಸೇವಾ ಶಾಲೆಯ ಸುನಿಲ್ ದ್ವಿತೀಯ ಹಾಗೂ ಚನ್ನಪಟ್ಟಣ ತಾಲೂಕಿನ ಇಗ್ಗಲೂರು ಸರ್ಕಾರಿ ಪ್ರೌಢಶಾಲೆಯ ಚಂದ್ರಶೇಖರ್ ಮೂರನೇ ಬಹುಮಾನ ಪಡೆದರು. ಇವರಿಗೆ ಕ್ರಮವಾಗಿ 20 ಸಾವಿರ, 5 ಸಾವಿರ ಹಾಗೂ 10 ಸಾವಿರ ನಗದು ಪುರಸ್ಕಾರ ವಿತರಿಸಲಾಯಿತು. ಜೊತೆಗೆ 30 ಶಾಲೆಗಳಿಗೆ ವಂಡರ್‌ಲಾ ವಿಶೇಷ ಮಾನ್ಯತಾ ಪ್ರಶಸ್ತಿ ಕೂಡ ಪ್ರಧಾನ ಮಾಡಲಾಯಿತು. ಕಂಪನಿಯ ಸಿಎಫ್‌ಓ ಸತೀಶ್ ಶೇಷಾದ್ರಿ, ಬೆಂಗಳೂರು ಪಾರ್ಕ್‌ನ ಮುಖ್ಯಸ್ಥ ಎಂ.ಬಿ. ಮಹೇಶ್ ಉಪಸ್ಥಿತರಿದ್ದರು.