ರಾಮನಗರ: ಡಿ.ಕೆ.ಸಹೋದರರು ದಿನನಿತ್ಯ ಕೋರ್ಟ್ ಕೇಸ್ಗಳಿಗೆ ತಿರುಗುತ್ತಾರೆ. ಅವರಿಗೆ ಬಿಜೆಪಿ ಮಾಡಿರುವ ಅಭಿವೃದ್ಧಿ ಕಾರ್ಯಗಳು ಎಲ್ಲಿ ಗೊತ್ತಾಗುತ್ತೆ ಎಂದು ಬೆಂಗಳೂರು ಗ್ರಾಮಾಂತರ ಬಿಜೆಪಿ ಅಭ್ಯರ್ಥಿ ಅಶ್ವಥ್ ನಾರಾಯಣಗೌಡ ಡಿಕೆ ಸಹೋದರರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕನಕಪುರದ ಹಾರೋಹಳ್ಳಿಯ ಚುನಾವಣಾ ಪ್ರಚಾರದಲ್ಲಿ ಟಾಂಗ್ ಕೊಟ್ಟ ಬಿಜೆಪಿ ಅಭ್ಯರ್ಥಿ, ಇಲ್ಲಿ ಉಸ್ತುವಾರಿ ಸಚಿವರು ಇದ್ದಾರೆ, ಜೊತೆಗೆ ಸಂಸದರಿದ್ದಾರೆ. ಅವರದ್ದೇ ಸರ್ಕಾರ ಇದೆ. ಆದರೂ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ ಎಂದು ಆರೋಪಿಸಿದರು.
ಇಲ್ಲಿನ ಸಂಸದರಿಗೆ ಹಾಗೂ ಸಚಿವ ಡಿ.ಕೆ.ಶಿವಕುಮಾರ್ಗೆ ಚುನಾವಣೆ ಬಂದಾಗ ಮಾತ್ರ ನೀರಾವರಿ ಯೋಜನೆ ನೆನಪಿಗೆ ಬರುತ್ತೆ. ಕೇಂದ್ರದಿಂದ ಬರುವ ಯೋಜನೆಗಳನ್ನ ಜಿಲ್ಲೆಯಲ್ಲಿ ಅನುಷ್ಠಾನ ಮಾಡಿಲ್ಲ. ಎಂಎಲ್ಎ, ಎಂಪಿ ಚುನಾವಣೆ ಬಂದಾಗ ಮಾತ್ರ ಇದರ ಬಗ್ಗೆ ಪ್ರಚಾರ ಮಾಡ್ತಾರೆ. ನೀವು ಸಂಸದರಾದ ಮೇಲೆ, ಶಿವಕುಮಾರ್ ಸಚಿವರಾದ ಮೇಲೆ ಕನಕಪುರ, ಮಾಗಡಿ, ರಾಮನಗರ, ಕುಣಿಗಲ್ನಲ್ಲಿ ಎಷ್ಟು ಎಕರೆ ನೀರಾವರಿ ಪ್ರದೇಶ ಮಾಡಿದ್ದೀರಿ ಹೇಳಿ ಎಂದು ಡಿಕೆ ಸುರೇಶ್ಗೆ ಪ್ರಶ್ನೆ ಮಾಡಿದರು.
ಈ ಬಾರಿ ಬೆ.ಗ್ರಾ. ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲುತ್ತೆ. ಡಿ.ಕೆ.ಸುರೇಶ್ ಸೋಲ್ತಾರೆ. ಕೇಂದ್ರದಿಂದ ರಾಜ್ಯಕ್ಕೆ ಬಂದಿರುವ ಅನುದಾನದ ಬಗ್ಗೆ ದಾಖಲೆ ಕೊಡುತ್ತೇನೆ. ಯುಗಾದಿ ಹಬ್ಬ ಮುಗಿದ ಬಳಿಕ ಸಂಪೂರ್ಣ ದಾಖಲೆ ಬಿಡುಗಡೆ ಮಾಡುತ್ತೇನೆ. ಬೇಕಾದರೆ ಡಿ.ಕೆ.ಶಿವಕುಮಾರ್ ಚರ್ಚೆಗೆ ಬರಲಿ ಎಂದು ಅಶ್ವಥ್ ನಾರಾಯಣಗೌಡ ವಾಗ್ದಾಳಿ ನಡೆಸಿದರು. ಬಳಿಕ ಮರಳವಾಡಿ ಸೇರಿದಂತೆ ಹಲವು ಕಡೆಗಳಲ್ಲಿ ಪ್ರಚಾರ ನಡೆಸಿದರು.