ರಾಮನಗರ/ಬೆಂಗಳೂರು: ನನ್ನ ಮಗಳಿಗೆ ಹಲವು ಒತ್ತಡ ಇದ್ದರೂ ಸಿನಿಮಾದಲ್ಲಿ ನಟನೆ ಮಾಡುತ್ತಿದ್ದಳು. ಅವಳ ಸಾವಿನ ಬಗ್ಗೆ ಅನುಮಾನ ಇದೆ. ನಾನು ದೂರಿನಲ್ಲಿ ಇಬ್ಬರ ಹೆಸರು ಸೂಚಿಸಿದ್ದೇನೆ. ನನ್ನ ಮಗಳು ಅಪಾರ್ಟ್ಮೆಂಟ್ನಲ್ಲಿ ಒಬ್ಬಳೆ ಇದ್ದಳು ಎಂದು ನಟಿ ಸೌಜನ್ಯ ತಂದೆ ಪ್ರಭು ಮಾದಪ್ಪ ತಿಳಿಸಿದ್ದಾರೆ.
ನಟಿ ಸೌಜನ್ಯ ಸವಿ ಮಾದಪ್ಪ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಂಬಳಗೂಡು ಪೊಲೀಸರು ಸ್ಥಳ ಮಹಜರು ನಡೆಸಿದ್ದಾರೆ. ಬೆಂಗಳೂರು ದಕ್ಷಿಣ ತಾಲೂಕಿನ ಕುಂಬಳಗೂಡು ಪೊಲೀಸ್ ಠಾಣೆ ವ್ಯಾಪ್ತಿಯ ಸನ್ ವರ್ತ್ ಅಪಾರ್ಟ್ಮೆಂಟ್ನ ಫ್ಲಾಟ್ ನಂ. 901ರಲ್ಲಿ ಸೌಜನ್ಯ ಆತ್ಮಹತ್ಯೆ ಮಾಡಿಕೊಂಡಿದ್ದರು. ಸೌಜನ್ಯ ಇಂಗ್ಲಿಷ್ನಲ್ಲಿ ಬರೆದಿರುವ 4 ಪುಟದ ಡೆತ್ನೋಟ್ ಪತ್ತೆಯಾಗಿತ್ತು. ಮಹಜರು ವೇಳೆ ನಟಿ ತಂದೆ ಪ್ರಭು ಮಾದಪ್ಪ ಹಾಗೂ ಸಹೋದರ ಕೂಡ ಆಗಮಿಸಿದ್ದರು.
ಈ ವೇಳೆ, ಮಾಧ್ಯಮದವರೊಂದಿಗೆ ಮಾತನಾಡಿದ ಪ್ರಭು ಮಾದಪ್ಪ, ನನ್ನ ಮಗಳು ಅಪಾರ್ಟ್ಮೆಂಟ್ನಲ್ಲಿ ಒಬ್ಬಳೆ ಇದ್ದಳು. ಅಲ್ಲದೇ ಕಾಲ್ ಮಾಡಿ ಕೊಡಗಿಗೆ ಬರುತ್ತೇನೆ ಎಂದಿದ್ದ ಅವಳು, ಮೂರು ದಿನ ಅಲ್ಲೇ ಇರುತ್ತೇನೆ ಎಂದೂ ಕೂಡ ಹೇಳಿದ್ದಳು. ಆದರೆ ಮಗಳ ಸಾವಾಗಿದೆ. ಕೊಡಗಿನ ನಮ್ಮ ಊರು ಕುಶಾಲನಗರ ತಾಲೂಕಿನ ಶುಂಠಿಕೊಪ್ಪದ ಅಂದಗೋವೆ ಗ್ರಾಮದಲ್ಲಿ ಅಂತ್ಯಸಂಸ್ಕಾರ ಮಾಡಲಾಗುವುದು ಎಂದರು.
ಸಾವಿನ ಬಗ್ಗೆ ಅನುಮಾನ:
ಸೌಜನ್ಯಗೆ ಸ್ವಲ್ಪ ಹಣಕಾಸಿನ ತೊಂದರೆ ಇರಬಹುದು. ಯಾರೋ ಕಿರುಕುಳ ಕೊಟ್ಟಿರುವ ಬಗ್ಗೆ ಅನುಮಾನ ಇದೆ. ಮನೆಯಲ್ಲಿ ಮಗಳ ಪೋನ್ ಕೂಡ ಇಲ್ಲ ಎಂಬ ಮಾಹಿತಿ ಇದೆ. ಕಳೆದ ಐದು ವರ್ಷಗಳಿಂದ ಬೆಂಗಳೂರಿನಲ್ಲಿ ವಾಸವಿದ್ದಳು. ಎರಡು ವರ್ಷದಿಂದ ಸನ್ ವರ್ತ್ ಅಪಾರ್ಟ್ಮೆಂಟ್ನ ಫ್ಲಾಟ್ನಲ್ಲಿ ಇದ್ದಳು. ಅವಳು ಗಗನಸಖಿಯಾಗಿಯೂ ಕೆಲಸ ಮಾಡಿದ್ದಳು. 'ಚೌಕಟ್ಟು', 'ಅರ್ಜುನ್ ಗೌಡ', 'ಫನ್' ಚಿತ್ರಗಳಲ್ಲಿ ನಟಿಸಿದ್ದಳು ಎಂದು ಪ್ರಭು ಮಾದಪ್ಪ ತಿಳಿಸಿದ್ದಾರೆ.
ತಂದೆ ಮಾದಪ್ಪ ನೀಡಿದ ದೂರಿನ ಅನ್ವಯ ನಟಿ ಸೌಜನ್ಯ ಪಿಎ ಮಹೇಶ್ ಎಂಬಾತನ ವಿಚಾರಣೆ ನಡೆಸಲಾಗುತ್ತಿದೆ. ಅಪಾರ್ಟ್ಮೆಂಟ್ನಲ್ಲಿ ಮಹಜರು ಮಾಡಿದ ನಂತರ ಪೊಲೀಸರು ಮಹೇಶ್ನನ್ನು ವಿಚಾರಣೆಗೆ ಕರೆದೊಯ್ದಿದ್ದಾರೆ. ಪ್ರಕರಣದ ಬಗ್ಗೆ ಕುಂಬಳಗೂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ವಿಶ್ವದ ಅತಿದೊಡ್ಡ ಚಲನಚಿತ್ರ ನಗರಿ 'ರಾಮೋಜಿ ಫಿಲಂ ಸಿಟಿ' ಅಕ್ಟೋಬರ್ 8ರಿಂದ ಪುನಾರಂಭ