ರಾಮನಗರ: ಟೋಲ್ ಗೇಟ್ನಲ್ಲಿ ನಡೆದ ಗಲಾಟೆ ಯುವಕನ ಕೊಲೆಯಲ್ಲಿ ಅಂತ್ಯವಾಗಿದೆ. ಬೆಂಗಳೂರು ದಕ್ಷಿಣ ತಾಲೂಕಿನ ತಾವರೆಕೆರೆಯ ಸಿಕ್ಕೆಪಾಳ್ಯ ನಿವಾಸಿ ಪವನ್ ನಾಯಕ್ ಮೃತ ದುರ್ದೈವಿಯಾಗಿದ್ದಾನೆ. ಹತ್ಯೆಗೀಡಾದ ಪವನ್ ಕುಮಾರ್ ರಾಮನಗರ ತಾಲೂಕಿನ ಶೇಷಗಿರಿಹಳ್ಳಿ ಟೋಲ್ ಪ್ಲಾಜಾದಲ್ಲಿ ಕೆಲಸ ಮಾಡುತ್ತಿದ್ದನು.
ಬೆಂಗಳೂರು ಮೂಲದ ಯುವಕರ ಗುಂಪು ಹಣದ ವಿಚಾರವಾಗಿ ಟೋಲ್ನಲ್ಲಿ ಕೆಲಸ ಮಾಡುತ್ತಿದ್ದ ಪವನ್ ಕುಮಾರ್ ನಾಯಕ್ ಜೊತೆಗೆ ಕಳೆದ ರಾತ್ರಿ ಗಲಾಟೆ ಮಾಡಿದ್ದಾರೆ. ಈ ವೇಳೆ ಸಿಬ್ಬಂದಿ ಹಾಗೂ ಕಾರಿನಲ್ಲಿ ಬಂದಿದ್ದ ಯುವಕರ ನಡುವೆ ಗಲಾಟೆ ನಡೆದಿದೆ. ಇದನ್ನೇ ಗುರಿಯಾಗಿಸಿಕೊಂಡ ಯುವಕರು ಕೆಲಸ ಮುಗಿಸಿ ಊಟಕ್ಕೆ ಹೋಗಿದ್ದಾಗ ಪವನ್ಗೆ ಹಾಕಿ ಸ್ಟಿಕ್ನಿಂದ ಹೊಡೆದು ಕೊಲೆ ಮಾಡಲಾಗಿದೆ. ಭಾನುವಾರ ರಾತ್ರಿ 10 ಗಂಟೆಯ ಸುಮಾರಿಗೆ ಗಲಾಟೆ ನಡೆದಿದ್ದು, 12 ಗಂಟೆಗೆ ವೇಳೆಗೆ ಯುವಕರ ಗುಂಪು ಹೆಜ್ಜಾಲ ಸಮೀಪ ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಬಿಡದಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಬಂದು ಪರಿಶೀಲಿಸಿದ್ದಾರೆ. ಮೃತದೇಹವನ್ನು ಬೆಂಗಳೂರು ರಾಜರಾಜೇಶ್ವರಿ ಆಸ್ಪತ್ರೆಗೆ ರವಾನಿಸಲಾಗಿದೆ. ಬಿಡದಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿಗಳ ಪತ್ತೆಗೆ ಶೋಧ ಕಾರ್ಯ ಆರಂಭಿಸಿದ್ದಾರೆ.
ಎಸ್ಪಿ ಪ್ರತಿಕ್ರಿಯೆ: ''ಭಾನುವಾರ ತಡರಾತ್ರಿ ಸುಮಾರು 12ರಿಂದ 1 ಗಂಟೆ ಸುಮಾರಿಗೆ ಶೇಷಗಿರಿ ಟೋಲ್ನಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿ ಪವನ್ ಕುಮಾರ್ ನಾಯಕ್ ಎಂಬುವರ ಕೊಲೆ ಮಾಡಲಾಗಿದೆ. ಅಪರಿಚಿತರು ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ. ಕೊಲೆಗೂ ಮುನ್ನ ರಾತ್ರಿ ಸುಮಾರು 9.30ರ ಸುಮಾರಿಗೆ ಟೋಲ್ನಲ್ಲಿ ಕಾರಿಗೆ ಗೇಟ್ ತೆಗೆಯುವುದು ಲೇಟ್ ಆದ ಕಾರಣಕ್ಕೆ ಸಂಬಂಧ ಗಲಾಟೆ ನಡೆದಿತ್ತು ಎಂಬುದು ಸಿಸಿಟಿವಿ ಪರಿಶೀಲಿಸಿದಾಗ ಗೊತ್ತಾಗಿದೆ'' ಎಂದು ರಾಮನಗರ ಎಸ್ಪಿ ಕಾರ್ತಿಕ್ ರೆಡ್ಡಿ ತಿಳಿಸಿದ್ದಾರೆ.
''ಬಳಿಕ ಕೆಲಸ ಮುಗಿಸಿಕೊಂಡು ಪವನ್ ಕುಮಾರ್ ನಾಯಕ್ ಹಾಗೂ ಆತನ ಸ್ನೇಹಿತ ಹೆಜ್ಜಾಲ ಸಮೀಪದ ಕೆರೆದಂಡೆ ಮೇಲೆ ಕುಳಿತಿದ್ದಾಗ ಅಪರಿಚಿತರು ಇಬ್ಬರ ಮೇಲೆಯೂ ಹಲ್ಲೆ ನಡೆಸಿದ್ದಾರೆ. ಆಗ ಪವನ್ ಕುಮಾರ್ ನಾಯಕ್ ಹಲ್ಲೆಯಿಂದ ಮೃತರಾದರೆ, ಮಂಜುನಾಥ್ ಗಾಯಗೊಂಡಿದ್ದಾರೆ. ಈ ಸಂಬಂಧ ಬಿಡದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ'' ಎಂದು ಎಸ್ಪಿ ಮಾಹಿತಿ ನೀಡಿದ್ದಾರೆ.
''ನಾಲ್ವರು ಬೆಂಗಳೂರು ನಗರ ಮೂಲದ ಆರೋಪಿಗಳು ಕೊಲೆ ಮಾಡಿರುವುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಆರೋಪಿಗಳನ್ನು ಇನ್ನಷ್ಟೇ ಬಂಧಿಸಬೇಕಿದೆ. ದೂರಿನ ಪ್ರಕಾರ ನಾಲ್ವರು ಹಲ್ಲೆ ಮಾಡಿ ಕೊಲೆ ಮಾಡಿರುವುದು ಗೊತ್ತಾಗಿದೆ. ಆದರೆ ಆರೋಪಿಗಳನ್ನು ಬಂಧಿಸಿ, ಹೆಚ್ಚಿನ ತನಿಖೆ ನಡೆಸಿದಾಗಲೇ ಪ್ರಕರಣದ ಸಂಪೂರ್ಣ ಮಾಹಿತಿ ಲಭ್ಯವಾಗಲಿದೆ'' ಎಂದು ಎಸ್ಪಿ ಹೇಳಿದರು.
ಶಿವಮೊಗ್ಗದಲ್ಲಿ ಬಾರ್ ಕ್ಯಾಶಿಯರ್ ಕೊಲೆ: ಬಾರ್ ಬಾಗಿಲು ಮುಚ್ಚುವ ಸಮಯ ಆಗಿದೆ ಎಂದಿದ್ದಕ್ಕೆ ಅಲ್ಲಿನ ಕ್ಯಾಷಿಯರ್ನನ್ನೇ ಮೂವರು ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ ಘಟನೆ ಆಯನೂರು ಗ್ರಾಮದಲ್ಲಿ ಭಾನುವಾರ ರಾತ್ರಿ ನಡೆದಿದೆ. ಆಯನೂರಿನ ನವರತ್ನ ಬಾರ್ನ ಕ್ಯಾಷಿಯರ್ ಸಚಿನ್ ಕುಮಾರ್ (27) ಕೊಲೆಗೀಡಾದವರು. ನಿರಂಜನ, ಸತೀಶ್ ಹಾಗೂ ಅಶೋಕ ನಾಯ್ಕ ಎಂಬುವರು ಚಾಕುವಿನಿಂದ ಚುಚ್ಚಿ ಕೊಲೆ ಮಾಡಿರುವ ಆರೋಪಿಗಳು. ಇವರು ಆಯನೂರು ಕೋಟೆ ತಾಂಡದ ನಿವಾಸಿಗಳಾಗಿದ್ದಾರೆ. ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ನವರತ್ನ ಬಾರ್ ಅಸಿಸ್ಟೆಂಟ್ ಕ್ಯಾಶಿಯರ್ ಅರುಣ್ ಕುಮಾರ್ ಅವರು ಕುಂಸಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಇದನ್ನೂ ಓದಿ: ವಿವಾಹೇತರ ಸಂಬಂಧದ ಅನುಮಾನ.. ಬಾಳು ನೀಡಿದ ಪತಿಯಿಂದಲೇ ಚಾಕುವಿನಿಂದ ಇರಿದು ಪತ್ನಿಯ ಹತ್ಯೆ!