ರಾಮನಗರ: ರೌಡಿ ಶೀಟರ್ ಸುನಿಲ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕನ್ನಡದ ಚಿತ್ರನಟಿ ಹಾಗೂ ಆಕೆಯ ತಾಯಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕನ್ನಡ ಚಿತ್ರನಟಿ ಪ್ರಿಯಾಂಕಾ (ಸವಿತಾ ) ಹಾಗೂ ಆಕೆಯ ತಾಯಿ ನಾಗಮ್ಮ ಬಂಧಿತ ಆರೋಪಿಗಳು. ನಟಿ ಪ್ರಿಯಾಂಕಾ ಕನ್ನಡದ ಯತ್ನ, ಐಪಿಸಿ ಸೆಕ್ಷನ್ 300 ಎಂಬ ಚಿತ್ರಗಳಲ್ಲಿ ಪೂರ್ಣ ಪ್ರಮಾಣದ ನಾಯಕಿಯಾಗಿ ಹಾಗೂ ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ಚಿತ್ರದಲ್ಲಿ ಹಾಸ್ಯ ನಟಿಯಾಗಿ ಅಭಿನಯಿಸಿದ್ದಾರೆ. ತೆಲುಗಿನ ಚಿತ್ರವೊಂದರಲ್ಲಿಯೂ ನಟಿಸಿದ್ದಾರೆ ಎಂದು ಹೇಳಲಾಗಿದೆ.
ಚನ್ನಪಟ್ಟಣ ತಾಲೂಕಿನ ರಾಂಪುರದ ತೋಟದ ಮನೆಯೊಂದರಲ್ಲಿ ಜನವರಿ 29ರಂದು ರೌಡಿ ಶೀಟರ್ ಸುನೀಲ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ, ಭೀಕರವಾಗಿ ಕೊಲೆ ಮಾಡಲಾಗಿತ್ತು. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡ ಚನ್ನಪಟ್ಟಣ ಗ್ರಾಮಾಂತರ ಪೋಲೀಸರು ತೀವ್ರ ತನಿಖೆ ನಡೆಸಿದ್ದರು.
ಹಳೆ ಮನೆ ವಿಚಾರವಾಗಿಯೇ ಸುನೀಲ್ನನ್ನು ಕೊಲೆ ಮಾಡಲಾಗಿದೆ ಎಂದು ಆತನ ಪೋಷಕರು ಆರೋಪಿಸಿದ್ದರು. ಕೊಲೆಯಲ್ಲಿ ನಟಿ ಪ್ರಿಯಾಂಕ ಮತ್ತು ಅವರ ತಾಯಿ ನಾಗಮ್ಮ ಕೈವಾಡವಿದೆ ಎಂದೂ ದೂರಿದ್ದರು. ಪಾತಕಿಗಳ ಬೆನ್ನತ್ತಿದ್ದ ಪೊಲೀಸರು ಮೊದಲು ಮನು ಅಲಿಯಾಸ್ ಮಾದೇಗೌಡ, ಶಿವರಾಜ್ ಉರುಫ್ ಕುದುರೆ ಎಂಬುವರನ್ನ ಬಂಧಿಸಿದ್ದರು. ತನಿಖೆ ವೇಳೆ ನಟಿ ಪ್ರಿಯಾಂಕ ಮತ್ತು ನಾಗಮ್ಮರ ಹೆಸರು ಸಹ ಕೇಳಿಬಂದಿತ್ತು. ಈವರೆಗೆ ತಲೆಮರೆಸಿಕೊಂಡಿದ್ದ ಇಬ್ಬರನ್ನು ಇದೀಗ ಪೋಲೀಸರು ಬಂಧಿಸಿದ್ದಾರೆ.