ರಾಯಚೂರು: ಐಆರ್‌ಸಿಟಿಸಿಯಲ್ಲಿ ಗುತ್ತಿಗೆ ಆಧಾರದ ಮೇಲೆ 5 ವರ್ಷದವರೆಗೆ ಕೆಲಸ ಕೊಡಿಸುವುದಾಗಿ ಹೇಳಿ ಜಾರ್ಖಂಡ್ ಮೂಲದವರಿಂದ ರಾಜ್ಯದ 35 ಜನರಿಗೆ ಲಕ್ಷಾಂತರ ರೂಪಾಯಿ ಪಂಗನಾಮ ಹಾಕಿರುವ ಪ್ರಕರಣವೊಂದು ತಡವಾಗಿ ಬೆಳಕಿಗೆ ಬಂದಿದೆ.
ನಗರದ ಐಡಿಎಸ್‌ಎಂಟಿ ಲೇ ಔಟ್‌ನಲ್ಲಿರುವ ಸರ್ಕಾರ/ಬ್ಯಾಂಕಿಂಗ್ ಸರ್ಕಾರೇತರ ಗುತ್ತಿಗೆ ಆಧಾರದ ಮೇಲೆ ಕೆಲಸ ನೀಡುವಂತಹ ಕಂಪನಿ/ಎನ್‌ಜಿಒಗಳಿಗೆ ನಿರುದ್ಯೋಗ ಅಭ್ಯರ್ಥಿಗಳನ್ನು ಸೇರಿಸುವುದು ಅಥವಾ ಕೆಲಸ ಒದಗಿಸುವ ಮ್ಯಾನ್ ಪವರ್ ಮತ್ತು ಬಿಸಿನೆಸ್ ಸೊಲ್ಯೂಷನ್ಸ್ ಸಂಸ್ಥೆಯೊಂದು ಮೋಸದ ಬಲೆಗೆ ಬಿದ್ದು ಸುಮಾರು 27 ಲಕ್ಷ ರೂಪಾಯಿ ಕಳೆದುಕೊಂಡಿದೆ.
ಈ ಸಂಸ್ಥೆಯ ಕೆಲಸಗಾರನೊಬ್ಬ ಆಗಸ್ಟ್ 22ರಂದು ಕೊಲ್ಕತ್ತಾದಲ್ಲಿ ಆರೋಪಿತರನ್ನು ಭೇಟಿ ಮಾಡಿದ್ದಾನೆ. ಈ ವೇಳೆ ಆರೋಪಿತರು, ನಮ್ಮ ಯುನಿವರ್ಸಲ್ ಪ್ರೈ.ಲಿ. ಕಂಪನಿಯು ಐಆರ್‌ಸಿಟಿಸಿಯೊಂದಿಗೆ ಒಪ್ಪಂದ ಮಾಡಿಕೊಂಡಿದೆ. 5 ವರ್ಷದ ಅವಧಿಗೆ ಗುತ್ತಿಗೆ ಆಧಾರದ ಮೇಲೆ ಸ್ಟೋರ್ ಕಿಪರ್, ಕಂಪ್ಯೂಟರ್ ಆಪರೇಟರ್, ಸೂಪರ್‌ವೈಜರ್, ಟೆಕ್ನಿಷಿಯನ್ ಹುದ್ದೆಗಳನ್ನು ಕರೆಯಲಾಗಿದೆ. ಯಾರಾದರೂ ಅಭ್ಯರ್ಥಿಗಳಿದ್ದರೆ ತಿಳಿಸಿ, ಅವರಿಗೆ ಕೆಲಸ ಕೊಡಿಸುತ್ತೇವೆ. ಮೊದಲಿಗೆ ಪ್ರತಿ ಅಭ್ಯರ್ಥಿಗೆ ಇಷ್ಟು ಹಣ ಖರ್ಚಾಗುತ್ತದೆ. ಅವರ ಬಯೋಡಟಾ ಮತ್ತು ಅಭ್ಯರ್ಥಿಗೆ ಇಂತಿಷ್ಟು ಹಣ ಕಳುಹಿಸುವಂತೆ ತಿಳಿಸಿದ್ದಾರೆ.
ಇವರ ಮಾತನ್ನು ನಂಬಿದ ಸಂಸ್ಥೆಯು 35 ಅಭ್ಯರ್ಥಿಗಳ ಬಯೋಡಟಾದ ಜೊತೆಗೆ 26 ಲಕ್ಷ 96 ಸಾವಿರ ರೂಪಾಯಿ ಹಣವನ್ನು ನೀಡಿದೆ. ಈ ಮೊತ್ತವನ್ನು 35 ಅಭ್ಯರ್ಥಿಗಳು ರೋಷನ್ ಕುಮಾರ್‌ನ ಎಕ್ಸಿಸ್ ಬ್ಯಾಂಕ್ ಅಕೌಂಟ್‌ಗೆ ಹಾಗೂ ಅಮೋಲನ ಹೆಚ್ಡಿಎಫ್ಸಿ ಬ್ಯಾಂಕ್ ಖಾತೆಗೆ, ಪೇಟಿಎಂನಿಂದ ಹಾಗೂ ಬ್ಯಾಂಕ್ನಿಂದ ಪಾವತಿಸಿದ್ದಾರೆ.
ಆದರೆ, ಇದಾದ ಬಳಿಕ ಬಹು ದಿನಗಳ ಕಳೆದರು ನಿರುದ್ಯೋಗಿ ಅಭ್ಯರ್ಥಿಗಳಿಗೆ ಐಆರ್ಸಿಟಿಸಿಯಿಂದ ಯಾವುದೇ ಆಫರ್ ಬಂದಿಲ್ಲ. ಈ ಬಗ್ಗೆ ಅನುಮಾನಗೊಂಡ ಸಂಸ್ಥೆ ಇದರ ಬಗ್ಗೆ ಮತ್ತೆ ಪರಿಶೀಲನೆ ನಡೆಸಿದಾಗ ನಕಲಿ ದಾಖಲೆಯನ್ನು ಸೃಷ್ಟಿಸಿ ಆಫರ್ ನೀಡಿರುವುದು ಗೊತ್ತಾಗಿದೆ. ಕೂಡಲೇ ಮ್ಯಾನ್ ಪವರ್ ಮತ್ತು ಬಿಸಿನೆಸ್ ಸೊಲ್ಯೂಷನ್ಸ್ ಸಂಸ್ಥೆ ಜಾರ್ಖಂಡ್ ಮೂಲದ ಮೂವರು ಆರೋಪಿಗಳ ವಿರುದ್ಧ ನಗರದ ಸದರ್‌ಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಓದಿ: ನಕಲಿ ಗೋಲ್ಡ್ ಗ್ಯಾಂಗ್ನಿಂದ ಮೋಸ ಹೋದಿರಾ ಜೋಕೆ.. ವಂಚಕರ ಬಗ್ಗೆ ದಾವಣಗೆರೆ ಎಸ್ಪಿ ಮಾಹಿತಿ