ರಾಯಚೂರು: ತುಂಗಭದ್ರಾ ಡ್ಯಾಂನಿಂದ ಕಾಲುವೆಗೆ ಬಿಟ್ಟ ಕಲುಷಿತ ನೀರು ಸೇವಿಸಿ ಓರ್ವ ಮಹಿಳೆ ಅಸ್ವಸ್ಥಗೊಂಡು ಮೃತಪಟ್ಟಿದ್ದು, 30ಕ್ಕೂ ಹೆಚ್ಚು ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ. ರಾಯಚೂರು ನಗರದ ಬಳಿಕ ಈಗ ಗ್ರಾಮೀಣ ಪ್ರದೇಶದ ಜನರು ಕಲುಷಿತ ನೀರು ಸೇವಿಸಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಜೂಕೂರು ಗ್ರಾಮದ ಮಹಿಳೆ ಲಕ್ಷ್ಮಿ (26) ಸಾವನ್ನಪ್ಪಿದವರು. ಇವರು ಕಲುಷಿತ ನೀರು ಸೇವಿಸಿ ವಾಂತಿ ಭೇದಿಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. ನಿನ್ನೆ ಮಧ್ಯಾಹ್ನ 1.40ಕ್ಕೆ ಮಟಮಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಾದ ಮಹಿಳೆ ಮೃತಪಟ್ಟಿದ್ದಾರೆ. ಲೋ ಬಿಪಿ ಆಗಿದ್ದರಿಂದ ವೈದ್ಯರು ರಿಮ್ಸ್ ಆಸ್ಪತ್ರೆಗೆ ರವಾನಿಸಲು ಹೇಳಿದ್ದಾರೆ. ಆದ್ರೆ ಆಸ್ಪತ್ರೆಗೆ ಹೋಗುವ ಮುನ್ನವೇ ಅವರು ಕೊನೆಯುಸಿರೆಳೆದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸುರೇಂದ್ರರ್ ಬಾಬು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ವಿಷಯ ತಿಳಿದ ಕೂಡಲೇ ವಲ್ಕಂದಿನ್ನಿ ಮತ್ತು ಜೂಕೂರು ಗ್ರಾಮಕ್ಕೆ ಆರೋಗ್ಯಾಧಿಕಾರಿಗಳ ತಂಡ ಗ್ರಾಮಕ್ಕೆ ತೆರಳಿ ಪರಿಶೀಲಿಸಿದ್ದಾರೆ. ಹೊಳೆ ನೀರು ಸೇವನೆ ಘಟನೆಗೆ ಕಾರಣ ಎಂದು ತಿಳಿಸಿದ್ದಾರೆ. ತಕ್ಷಣವೇ ನಾವು ಹೊಳೆ ನೀರು ಸರಬರಾಜನ್ನು ನಿಲ್ಲಿಸಿದ್ದೆವು ಎಂದರು.
ಇದುವರೆಗೆ ಜೂಕೂರು ಗ್ರಾಮದಲ್ಲಿ ಒಟ್ಟು 14 ಪ್ರಕರಣಗಳು ಹಾಗೂ ವಲ್ಕಂದಿನಿ ಗ್ರಾಮದಲ್ಲಿ 24 ಪ್ರಕರಣಗಳು ಹಾಗೂ ಒಂದು ಬಾರಿ ವಾಂತಿ ಭೇದಿಯಾಗಿರುವ ಒಟ್ಟು 20 ಪ್ರಕರಣಗಳು ದಾಖಲಾಗಿವೆ. ಆರೋಗ್ಯಾಧಿಕಾರಿಗಳು ಗ್ರಾಮಕ್ಕೆ ತೆರಳಿ ಆರೋಗ್ಯ ಶಿಕ್ಷಣ ನೀಡುತ್ತಿದ್ದಾರೆ. ತಾತ್ಕಾಲಿಕ ಚಿಕಿತ್ಸಾ ಶಿಬಿರಗಳನ್ನೂ ಮಾಡಿದ್ದೇವೆ. ಅಲ್ಲಿ ವೈದ್ಯಾಧಿಕಾರಿಗಳು, ಸಿಹೆಚ್ಓ, ಆಶಾ ಕಾರ್ಯಕರ್ತೆಯರು ಇದ್ದಾರೆ. ಗಂಭೀರ ಪ್ರಕರಣಗಳಿದ್ದರೆ ಹತ್ತಿರದಲ್ಲೇ ಇರುವ ಆರೋಗ್ಯ ಕೇಂದ್ರಗಳಿಗೆ ಕೊಂಡೊಯ್ಯಲು ಆಂಬ್ಯುಲೆನ್ಸ್ ವ್ಯವಸ್ಥೆಯನ್ನೂ ಮಾಡಲಾಗಿದೆ ಎಂದು ಅವರು ಹೇಳಿದರು.
ಇದನ್ನೂ ಓದಿ : ಕುಂದಾಪುರ ಬಳಿ ಹೆದ್ದಾರಿಯಿಂದ ಸಮುದ್ರಕ್ಕೆ ಹಾರಿದ ಕಾರು: ಓರ್ವ ಸಾವು, ಮತ್ತೋರ್ವ ನಾಪತ್ತೆ