ರಾಯಚೂರು: ರಸ್ತೆಬದಿ ತಡೆಗೋಡೆಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ವೃದ್ಧ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟು ಪತ್ನಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಘಟನೆ ಮಾನವಿ ತಾಲೂಕಿನ ಬೋಮ್ಮನಾಳ ಕ್ರಾಸ್ ಬಳಿ ಈ ದುರ್ಘಟನೆ ಸಂಭವಿಸಿತು.
ಮೃತ ವ್ಯಕ್ತಿಯನ್ನು ಕಂಪ್ಲಿಯ ಮೂಲದ ಪಂಚಯ್ಯ ಸ್ವಾಮಿ (70) ಎಂದು ಗುರುತಿಸಲಾಗಿದೆ. ಪತ್ನಿ ಶಾಂತಮ್ಮ ಗಂಭೀರವಾಗಿ ಗಾಯಗೊಂಡಿದ್ದು ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಕಂಪ್ಲಿ ಪಂಚಯ್ಯ ಸ್ವಾಮಿ ಪತ್ನಿಯೊಡನೆ ರಾಯಚೂರಿಗೆ ಬಟ್ಟೆ ವ್ಯಾಪಾರಕ್ಕೆ ಬೆಳಿಗ್ಗೆ ಬಂದಿದ್ದರು. ವ್ಯಾಪಾರ ಮುಗಿಸಿಕೊಂಡು ವಾಪಸ್ ತಮ್ಮೂರಿಗೆ ತೆರಳುವಾಗ ಮಾರ್ಗಮಧ್ಯೆ ರಸ್ತೆ ಬದಿಯಲ್ಲಿರುವ ತಡೆಗೋಡೆಗೆ ಕಾರು ಡಿಕ್ಕಿ ಹೊಡೆದಿದೆ.
ಮಾನವಿ ಪೊಲೀಸರು ವೃದ್ಧನ ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಗಾಯಗೊಂಡ ಶಾಂತಮ್ಮ ಅವರನ್ನು ರಿಮ್ಸ್ ಆಸ್ಪತ್ರೆ ದಾಖಲಿಸಲಾಗಿದೆ. ಮಾನವಿ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ.