ರಾಯಚೂರು : ರಾಜ್ಯಾದ್ಯಂತ ಇಂದು ಶಿಕ್ಷಕರ ನೇಮಕಾತಿ ಸಿಇಟಿ ಪರೀಕ್ಷೆ ನಡೆಯುತ್ತಿದೆ. ರಾಯಚೂರಿನ ಬಾಲಕಿಯರ ಪದವಿ ಪೂರ್ವ ಪರೀಕ್ಷೆ ಕೇಂದ್ರಕ್ಕೆ ಆರು ದಿನಗಳ ನವಜಾತ ಶಿಶುವಿನೊಂದಿಗೆ ಮಹಿಳೆಯೋರ್ವಳು ಆಗಮಿಸಿ ಪರೀಕ್ಷೆ ಬರೆದಿದ್ದಾರೆ. ಕೊಪ್ಪಳ ಜಿಲ್ಲೆ ಕಾರಟಗಿ ತಾಲೂಕಿನ ಗೂಡೂರು ಮೂಲದ ಜ್ಯೋತಿ ಪರೀಕ್ಷೆ ಬರೆದ ಅಭ್ಯರ್ಥಿ.
ನವಜಾತ ಶಿಶು ಜೊತೆಗೆ ಅಭ್ಯರ್ಥಿಯ ಗಂಡ ಮತ್ತು ಅತ್ತೆ ಪರೀಕ್ಷೆ ಕೇಂದ್ರದ ಹೊರೆಗೆ ಓಡಾಡುತ್ತಿದ್ದಾರೆ. ಪರೀಕ್ಷೆ ಆರಂಭವಾಗುತ್ತಿದಂತೆ ನವಜಾತ ಶಿಶುಬಿಟ್ಟು ತಾಯಿ ಪರೀಕ್ಷೆಗೆ ತೆರಳಿದರು. ಇತ್ತ ತಾಯಿ ಬಿಟ್ಟು ಹೋಗುತ್ತಿದ್ದಂತೆ ನವಜಾತ ಶಿಶು ಅಳಲು ಶುರು ಮಾಡಿದ್ದು, ಶಿಶುವನ್ನು ಪೋಷಕರು ಸಮಾಧಾನ ಮಾಡುತ್ತಿರುವ ದೃಶ್ಯ ಕಂಡು ಬಂದಿದೆ.
ಇನ್ನು ಪಿಎಸ್ಐ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣ ಹಿನ್ನೆಲೆ ಪರೀಕ್ಷೆ ಪದ್ಧತಿಯಲ್ಲಿ ಹೊಸ ಬದಲಾವಣೆ ಮಾಡಲಾಗಿದೆ. ಇಂದು ನಡೆದ ಶಿಕ್ಷಕರ ಸಿಇಟಿ ಪರೀಕ್ಷೆಯಲ್ಲಿ ಹಲವು ಕಟ್ಟುನಿಟ್ಟಿನ ಕ್ರಮವಹಿಸಲಾಗಿದೆ. ಪರೀಕ್ಷೆ ಕೇಂದ್ರಕ್ಕೆ ತೆರಳುವ ಮುನ್ನ ಅಭ್ಯರ್ಥಿಗಳ ತಪಾಸಣೆ ಮಾಡಲಾಗುತ್ತಿದೆ. ಅಭ್ಯರ್ಥಿಗಳನ್ನು ಸಾಲಾಗಿ ನಿಲ್ಲಿಸಿ ಮೆಟಲ್ ಡಿಟೆಕ್ಟಿವ್ ಯಂತ್ರ ಹಿಡಿದು ತಪಾಸಣೆ ಜತೆಯಲ್ಲಿ ಕಿವಿ, ತಲೆ ಮತ್ತು ದೇಹವನ್ನು ಸಂಪೂರ್ಣವಾಗಿ ತಪಾಸಣೆ ಮಾಡಿದ ಬಳಿಕ ಅಭ್ಯರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ.
ಚಾಮರಾಜನಗರದಲ್ಲಿ ಶಿಕ್ಷಕರ ನೇಮಕಾತಿ ಪರೀಕ್ಷೆ ಸುಸೂತ್ರ : ಪ್ರಾಥಮಿಕ ಶಿಕ್ಷಕರ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆಯ ಮೊದಲ ದಿನವಾದ ಇಂದು ಚಾಮರಾಜನಗರದ 8 ಪರೀಕ್ಷಾ ಕೇಂದ್ರಗಳಲ್ಲಿ ಸುಸೂತ್ರವಾಗಿ ಪರೀಕ್ಷೆ ನಡೆದಿದೆ. ಯಾವುದೇ ಅಕ್ರಮಗಳಿಗೆ ಅವಕಾಶವಾಗದಂತೆ ಅತ್ಯಂತ ಜವಾಬ್ದಾರಿಯುತ ನಿರ್ವಹಣೆಗೆ ಜಿಲ್ಲಾಡಳಿತ ಮುಂದಾಗಿದ್ದು, ಜಿಲ್ಲಾಕೇಂದ್ರದ ಒಟ್ಟು 8 ಪರೀಕ್ಷಾ ಕೇಂದ್ರಗಳಲ್ಲಿ ಹೆಚ್ಚಿನ ಭದ್ರತೆಯೊಂದಿಗೆ 2020 ಮಂದಿ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದಾರೆ.
ಚಾಮರಾಜನಗರದ ಜೆಎಸ್‌ಎಸ್ ಬಾಲಕರ ಹಾಗೂ ಬಾಲಕಿಯರ ಪ್ರೌಢಶಾಲೆ, ಸತ್ತಿ ರಸ್ತೆಯಲ್ಲಿರುವ ಸರ್ಕಾರಿ ಬಾಲಕರ ಹಾಗೂ ಬಾಲಕಿಯರ ಪ್ರೌಢಶಾಲೆ, ಎಂಸಿಎಸ್ ಪ್ರೌಢಶಾಲೆ, ಸಿದ್ದಾರ್ಥ್‌ನಗರದ ಸಂತ ಜೋಸೆಫ್ ಪ್ರೌಢಶಾಲೆ, ಕರಿನಂಜನಪುರ ಶ್ರೀದೇವಿ ಟೆಕ್ಸ್ಟೈಲ್ಸ್ ಹತ್ತಿರವಿರುವ ಯೂನಿವರ್ಸಲ್ ಪ್ರೌಢಶಾಲೆ ಮತ್ತು ಚನ್ನಿಪುರ ಮೋಳೆ ರಸ್ತೆಯಲ್ಲಿರುವ ಸೇವಾ ಭಾರತಿ ಪ್ರಾಥಮಿಕ ಇಂಗ್ಲಿಷ್ ಶಾಲೆಯಲ್ಲಿ ಪರೀಕ್ಷೆ ನಡೆದಿದೆ. ಪರೀಕ್ಷಾ ಕಾರ್ಯದ ಮೇಲುಸ್ತುವಾರಿಯನ್ನು ಜಿಲ್ಲಾಧಿಕಾರಿ, ಜಿಪಂ ಸಿಇಒ, ಎಸ್ಪಿ ವಹಿಸಿಕೊಂಡಿದ್ದರು.
ಪರೀಕ್ಷಾ ಕೇಂದ್ರಕ್ಕೆ ಪೆನ್ನು, ಪೆನ್ಸಿಲ್ ಹಾಗೂ ಜಾಮಿಟ್ರಿ ಬಾಕ್ಸ್ ಹೊರತುಪಡಿಸಿ ಉಳಿದಂತೆ ಯಾವುದೇ ವಸ್ತುಗಳನ್ನು ತರುವಂತಿರಲಿಲ್ಲ. ಪ್ರತಿ ಪರೀಕ್ಷಾ ಕೊಠಡಿಯಲ್ಲಿ ಮೆಟಲ್ ಡಿಟೆಕ್ಟರ್‌ನಿಂದ ಅಭ್ಯರ್ಥಿಗಳು ಹಾಗೂ ಎಲೆಕ್ಟ್ರಾನಿಕ್ ಸಾಧನಗಳನ್ನು ಗುರುತಿಸಿ ಒಳ ಬಿಡಲಾಗಿದೆ. ಪ್ರತಿ ಕೊಠಡಿಯಲ್ಲಿ ಗೋಡೆ ಗಡಿಯಾರ ಅಳವಡಿಸಿದ್ದರಿಂದ ಅಭ್ಯರ್ಥಿಗಳು ವಾಚ್ ಕಟ್ಟುವುದಕ್ಕೂ ನಿರ್ಬಂಧ ಹೇರಿ ಸಿಸಿಟಿವಿ ಕಣ್ಗಾವಲಿನಲ್ಲಿ ಪರೀಕ್ಷೆ ನಡೆಸಲಾಗಿದೆ.
ಪಿಎಸ್ಐ ಅಕ್ರಮ ನೇಮಕಾತಿ ಬಳಿಕ ನಡೆಯುತ್ತಿರುವ ಶಿಕ್ಷಕರ ನೇಮಕಾತಿ ಪರೀಕ್ಷೆಯಲ್ಲಿ ಯಾವುದೇ ಗೊಂದಲ ಉಂಟಾಗದಂತೆ ಚಾಮರಾಜನಗರ ಜಿಲ್ಲಾಡಳಿತ ಮೊದಲ ದಿನದ ಪರೀಕ್ಷೆ ನಡೆಸಿದ್ದು, ಭಾನುವಾರ ಮತ್ತೊಂದು ಪರೀಕ್ಷೆ ನಡೆಯಲಿದೆ.
ಇದನ್ನೂ ಓದಿ: ರಾಜ್ಯದಲ್ಲಿ ಇನ್ಮುಂದೆ ವರ್ಷಕ್ಕೆ ಎರಡು ಬಾರಿ ನಡೆಯಲಿದೆ ಕೆ-ಟಿಇಟಿ ಪರೀಕ್ಷೆ