ರಾಯಚೂರು : ಜಿಲ್ಲೆಯ ಮಸ್ಕಿ ತಾಲೂಕಿನ ಇಲಾಲಪುರ ಗ್ರಾಮದಲ್ಲಿ ತೋಳ ದಾಳಿ ನಡೆಸಿದ ಪರಿಣಾಮ ಓರ್ವ ಬಾಲಕ ಸೇರಿದಂತೆ ನಾಲ್ವರು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.
ರೆಡ್ಡಪ್ಪ ಬಸನಗೌಡ, ಶಿವಪ್ಪ ಬಸಪ್ಪ, ಮೀನಾಕ್ಷಿ ಮಲ್ಲಪ್ಪ, ಬಾಲಕ ಅಭಿಷೇಕ್ ಸಿದ್ದಪ್ಪ ಗಾಯಗೊಂಡಿದ್ದು ಚಿಕಿತ್ಸೆಗೆ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ತೋಳ ದಾಳಿಯಿಂದ ಆತಂಕಗೊಂಡ ಗ್ರಾಮಸ್ಥರು ತೋಳವನ್ನ ಹುಡುಕಿ ಕೊಂದುಹಾಕಿದ್ದಾರೆ.
ಇಲಾಲಪುರ ಗ್ರಾಮದ ದಾಳಿಗೂ ಮುನ್ನ, ಚಿಲ್ಕರಾಗಿ ಗ್ರಾಮದಲ್ಲಿ ತೋಳ ಕಾಣಿಸಿಕೊಂಡಿತ್ತು. ಇದರಿಂದ ಗಾಬರಿಗೊಂಡ ಗ್ರಾಮಸ್ಥರು ತೋಳವನ್ನ ಸೆರೆ ಹಿಡಿಯುವುದಕ್ಕೆ ಕೊಡಲಿ, ಕಟ್ಟಿಗೆ ಹಿಡಿದುಕೊಂಡು ಶೋಧ ನಡೆಸಿದ್ದರು. ಈ ನಡುವೆ ಚಿಲ್ಕರಾಗಿ ಗ್ರಾಮದ ಪಕ್ಕದಲ್ಲಿರುವ ಇಲಾಲಪುರ ಗ್ರಾಮಕ್ಕೆ ನುಗ್ಗಿ ನಾಲ್ವರ ಮೇಲೆ ತೋಳ ದಾಳಿ ನಡೆಸಿದೆ. ತೋಳಕ್ಕೆ ಹುಚ್ಚು ಹಿಡಿದಿತ್ತು ಎನ್ನಲಾಗಿದ್ದು ಕವಿತಾಳ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
ಕಳೆದ ವರ್ಷ ಇದೇ ಗ್ರಾಮದಲ್ಲಿ ತೋಳದ ದಾಳಿಯಿಂದ ಓರ್ವ ಮೃತಪಟ್ಟು 11 ಜನ ಗಾಯಗೊಂಡಿದ್ದರು. ಆಗಲೂ ಸಹ ರೊಚ್ಚಿಗೆದ್ದ ಗ್ರಾಮಸ್ಥರು ತೋಳವನ್ನು ಹೊಡೆದು ಸಾಯಿಸಿದ್ದರು.