ರಾಯಚೂರು : ಆರ್ಥಿಕ ಸಂಕಷ್ಟದ ನಡುವೆಯೂ ಸಿಎಂ ಬಿ.ಎಸ್.ಯಡಿಯೂರಪ್ಪ ಅಳೆದು ತೂಗಿ ಬಜೆಟ್ ಮಂಡನೆಗೆ ಸಿದ್ಧತೆ ನಡೆಸುತ್ತಿದ್ದಾರೆ. ಈ ಬಾರಿಯ ಬಜೆಟ್ನಲ್ಲಿ ಕಲ್ಯಾಣ ಕರ್ನಾಟಕ ಭಾಗದ ಆರು ಜಿಲ್ಲೆಗಳ ಪೈಕಿ ರಾಯಚೂರಿಗೆ ಅಗತ್ಯ ಅನುದಾನ ಸಿಗುವ ನಿರೀಕ್ಷೆ ಜನರಲ್ಲಿದೆ.
ಜಿಲ್ಲೆಯು ಶೈಕ್ಷಣಿಕವಾಗಿ ಹಿಂದುಳಿದಿದೆ. ಶಿಕ್ಷಣ ಮಟ್ಟ ಸುಧಾರಿಸಲು ಹಲವು ಯೋಜನೆಗಳನ್ನ ಜಾರಿಗೊಳಿಸಲಾಗುತ್ತಿದೆ. ಆದರೂ, ನಿರೀಕ್ಷತ ಫಲಿತಾಂಶ ಬರುತ್ತಿಲ್ಲ ಎಂಬ ಆಪಾದನೆಯಿಂದ. ಈ ನಡುವೆ ಇತ್ತೀಚೆಗೆ ಯಾದಗಿರಿ-ರಾಯಚೂರು ಜಿಲ್ಲೆಯೊಳಗಡೆ ನೂತನ ವಿಶ್ವವಿದ್ಯಾಲಯ ಮಂಜೂರಾತಿ ಮಾಡಿ ಕುಲಪತಿಗಳನ್ನು ನೇಮಕ ಮಾಡಲಾಗಿದೆ.
ವಿಶ್ವವಿದ್ಯಾಲಯ ಬುನಾದಿಯಿಂದ ತಲೆ ಎತ್ತಬೇಕಾಗಿದೆ. ಹೀಗಾಗಿ, ಸರಿ ಸುಮಾರು 600 ಕೋಟಿ ರೂಪಾಯಿ ನೂತನ ವಿವಿಗೆ ಬೇಕಾಗಿದೆ. ಇದಕ್ಕಾಗಿ ವಿವಿಯಿಂದ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ಮೊದಲ ಆದ್ಯತೆ ಮೇರೆಗೆ ಪೂರ್ಣ ನೀಡದಿದ್ದರೂ, ನೂರಾರು ಕೋಟಿ ರೂಪಾಯಿ ಅವಶ್ಯಕತೆಯಿದೆ. ಇದಕ್ಕೆ ಸಿಎಂ ಸ್ಪಂದಿಸುತ್ತಾರೆ ಅನ್ನುವ ನಿರೀಕ್ಷೆಯಿದೆ.
ನಗರದ ಹೊರವಲಯದ ಯರಮರಸ್ ವಿವಿಐಪಿ ಸರ್ಕ್ಯೂಟ್ ಏರ್‌ಪೋರ್ಟ್ ನಿರ್ಮಾಣಕ್ಕೆ ಸರ್ವೇ ಕಾರ್ಯ ಮುಗಿದಿದೆ. ಕಲ್ಯಾಣ ಕರ್ನಾಟಕ ಪ್ರಾದೇಶಿಕ ಅಭಿವೃದ್ದಿ ಮಂಡಳಿಯ ಅನುದಾನದಿಂದ ಜಿಲ್ಲೆಯ ಶಾಸಕರು ಸುಮಾರು 50 ಕೋಟಿ ರೂಪಾಯಿ ನೀಡುವುದಾಗಿ ತಿಳಿಸಿದ್ದಾರೆ. ಇನ್ನೂ ಅಧಿಕ ಮೊತ್ತದ ಹಣ ವಿಮಾನ ನಿಲ್ದಾಣಕ್ಕೆ ಅವಶ್ಯಕತೆಯಿದೆ. ಏರ್ ಪೋರ್ಟ್ ನಿರ್ಮಾಣದ ಹಣಕ್ಕೆ ಬೇಡಿಕೆ ಸಲ್ಲಿಸಲಾಗಿದೆ.
ಓದಿ : ಅವಕಾಶ ವಂಚಿತ ಸಮುದಾಯಗಳ ಏಳಿಗೆಗೆ ನಿಗಮ ಮಂಡಳಿ ಸ್ಥಾಪಿಸಿದ್ದೇವೆ : ಹೈಕೋರ್ಟ್ಗೆ ಸರ್ಕಾರದ ಸ್ಪಷ್ಟನೆ
ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಬೇಕು ಎನ್ನುವ ಬೇಡಿಕೆಯಿದೆ. ಇಲ್ಲವೇ ರಿಮ್ಸ್ ಅಧೀನದಲ್ಲಿರುವ ಓಪೆಕ್ ಆಸ್ಪತ್ರೆಯನ್ನು ಉನ್ನತ ದರ್ಜೆಗೆ ಏರಿಸಬೇಕೆಂದು ಜಿಲ್ಲೆಯ ಜನತೆ ಹಲವು ದಿನಗಳಿಂದ ಹೋರಾಟ ನಡೆಸುತ್ತಾರೆ. ರೋಗಿಗಳು ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರು, ಹೈದರಾಬಾದ್, ಸೋಲಾಪುರಕ್ಕೆ ತೆರಳುವ ಸ್ಥಿತಿಯಿದೆ.
ರಾಜ್ಯದಲ್ಲಿ ಏಮ್ಸ್ ಮಂಜೂರಾತಿ ಅವಕಾಶ ದೊರಕಿದರೆ, ಅದನ್ನು ರಾಯಚೂರು ಜಿಲ್ಲೆಗೆ ನೀಡುವಂತೆ ಈಗಾಗಲೇ ಹೋರಾಟ ನಡೆಸಲಾಗುತ್ತಿದೆ. ಕಳೆದ ಬಾರಿ ಜಿಲ್ಲೆಗೆ ಐಐಟಿ ಕೈತಪ್ಪಿಸುವ ಮೂಲಕ ವಂಚನೆ ಮಾಡಲಾಗಿದೆ ಆರೋಪಿವಿದೆ. ಹೀಗಾಗಿ, ಹಿಂದುಳಿದ ಭಾಗವೆಂದು ಗುರುತಿಸಿ ರಾಯಚೂರು ಜಿಲ್ಲೆಯಲ್ಲಿ ಏಮ್ಸ್ ಸ್ಥಾಪನೆ ಮಾಡಬೇಕೆಂದು ಶಾಸಕರು ಸಿಎಂಗೆ ಮನವಿ ಸಲ್ಲಿಸಿದ್ದಾರೆ.
ಹಿಂದಿನ ಸಮಿಶ್ರ ಸರ್ಕಾರದಲ್ಲಿ ಘೋಷಣೆ ಮಾಡಿದ ಯೋಜನೆಗಳನ್ನು ಪೂರ್ಣಗೊಳಿಸಬೇಕಿದೆ. ರಾಜಕೀಯ ದ್ವೇಷಕ್ಕೆ ಯೋಜನೆಗಳನ್ನು ಮೊಟಕುಗೊಳಿಸದೆ, 200 ಕೋಟಿ ರೂ. ಅನುದಾನ ನೀಡುವಂತೆ ಕಾಂಗ್ರೆಸ್ ಶಾಸಕ ಬಸವನಗೌಡ ದದ್ದಲ್ ಮನವಿ ಸಲ್ಲಿಸಿದ್ದಾರೆ.
ತುಂಗಭದ್ರಾ ಎಡದಂಡೆ ನಾಲೆಯ ಕೆಳ ಭಾಗದ ರೈತರಿಗೆ ನೀರಿನ ಸಮಸ್ಯೆಯಿದೆ. ಶಾಶ್ವತ ಪರಿಹಾರಕ್ಕೆ ಯೋಜನೆ ಮತ್ತು ನಾರಾಯಣಪುರ ಬಲದಂಡೆ ನಾಲೆಯಿಂದ ನೀರಾವರಿಗೆ ಹೆಚ್ಚಿನ ಅನುದಾನ ನೀಡುವ ನಿರೀಕ್ಷೆ ಜನತೆಯಲ್ಲಿದೆ. ಮುಖ್ಯವಾಗಿ ಬಿ ಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾಗಲು ಜಿಲ್ಲೆಯ ಶಾಸಕರೊಬ್ಬರು ರಾಜೀನಾಮೆ ಸಲ್ಲಿಸಿರುವ ಋಣಭಾರವು ಸಿಎಂ ಮೇಲೆ ಇದೆ.