ರಾಯಚೂರು: ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಪ್ರಯುಕ್ತ ನಗರದ ಜಿಲ್ಲಾ ಪೊಲೀಸ್ ಕಚೇರಿ ಆವರಣದ ಡಿಆರ್ ಮೈದಾನದಲ್ಲಿ ಡಿಸಿಎಂ, ಜಿಲ್ಲಾ ಉಸ್ತುವರಿ ಸಚಿವ ಲಕ್ಷ್ಮಣ ಸವದಿ ರಾಷ್ಟ್ರಧ್ವಜಾರೋಹಣ ನೆರವೇರಿಸಿದ್ರು.
ನಂತರ ತೆರೆದ ವಾಹನದಲ್ಲಿ ಗೌರವ ವಂದನೆ ಸ್ವೀಕರಿಸಿದ್ರು. ಬಳಿಕ ಪೊಲೀಸ್ ಇಲಾಖೆ, ಅರಣ್ಯ ಇಲಾಖೆ, ಗೃಹ ರಕ್ಷಕ ದಳದ ಸಿಬ್ಬಂದಿಯಿಂದ ಪಂಥಸಂಚಲನ ನಡೆಸಲಾಯಿತು. ಇದಾದ ಬಳಿಕ ಕಲ್ಯಾಣ ಕರ್ನಾಟಕದ ಉತ್ಸವದ ಸಂದೇಶವನ್ನ ಡಿಸಿಎಂ ನೀಡಿದ್ರು. ಕೊರೊನಾ ಸೋಂಕಿನ ಭೀತಿಯಿಂದಾಗಿ ಸಾಂಸ್ಕೃತಿಕ ಕಾರ್ಯಕ್ರಮ ರದ್ದುಗೊಳಿಸಲಾಗಿದೆ. ನಿಜಾಮಾರ ಆಳ್ವಿಕೆಗೆ ಒಳಪಟ್ಟಿದ್ದ ಹೈದರಾಬಾದ್-ಕರ್ನಾಟಕ ವ್ಯಾಪ್ತಿಗೆ ಬರುವ ರಾಯಚೂರು ಜಿಲ್ಲೆ ಸೇರಿದಂತೆ 6 ಜಿಲ್ಲೆಗಳಿಗೆ 1947ರ ಆ. 15ರಂದು ಸ್ವಾತಂತ್ರ್ಯ ಸಿಕ್ಕಿರಲಿಲ್ಲ.
ಆಗ ಈ ಭಾಗದ ಹೋರಾಟಗಾರರು ನಿಜಾಮಾರ ವಿರುದ್ಧ ಸಿಡಿದೆದ್ದು ಹೋರಾಟ ನಡೆಸಿದ ಫಲವಾಗಿ 1948ರ ಸೆ. 17ರಂದು ಸ್ವಾತಂತ್ರ್ಯ ಸಿಕ್ಕಿತು. ಹೀಗಾಗಿ ಹೈದರಾಬಾದ್ ಕರ್ನಾಟಕ ವಿಮೋಚನಾ ದಿನಾಚರಣೆ ಆಚರಿಸಲಾಗುತ್ತಿತ್ತು. ಆದ್ರೆ ಈಗಿನ ಬಿಜೆಪಿ ಸರ್ಕಾರ ಹೈದರಾಬಾದ್ ಕರ್ನಾಟಕವನ್ನು ಕಲ್ಯಾಣ ಕರ್ನಾಟಕ ಎಂದು ಹೆಸರು ಬದಲಾಯಿಸಿ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಆಚರಿಸಲಾಗುತ್ತಿದೆ.