ರಾಯಚೂರು : ನಗರದ ಸಿಯಾತಲಾಬ್ ಬಡಾವಣೆಗೆ ಮಳೆ ನೀರು ನುಗ್ಗದಂತೆ ಶಾಶ್ವತ ವ್ಯವಸ್ಥೆ ಕಲ್ಪಿಸುವಂತೆ ಬಡಾವಣೆ ಗೆಳೆಯರ ಬಳಗ ಒತ್ತಾಯಿಸಿದೆ.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಬಡಾವಣೆಯ ಮುಖಂಡರು, ಭಾರಿ ಪ್ರಮಾಣದಲ್ಲಿ ಮಳೆ ಸುರಿದಾಗ ಬಡಾವಣೆಗೆ ನೀರು ನುಗ್ಗುತ್ತದೆ. ಇದರಿಂದ ಮನೆಯಲ್ಲಿನ ಗೃಹೋಪಯೋಗಿ ವಸ್ತುಗಳು, ಆಹಾರ ಧಾನ್ಯಗಳು ನೀರು ಪಾಲಾಗುತ್ತಿವೆ. ಮಳೆಯಾದ್ರೆ ಇಲ್ಲಿ ವಾಸ ಮಾಡದ ಪರಿಸ್ಥಿತಿ ನಿರ್ಮಾಣವಾಗುತ್ತೆ.
ಈ ಬಗ್ಗೆ ಹಲವು ಬಾರಿ ಜಿಲ್ಲಾಡಳಿತಕ್ಕೆ, ನಗರಸಭೆ, ಶಾಸಕರ ಗಮನಕ್ಕೆ ತರುವ ಮೂಲಕ ಮಳೆ ನೀರು ಒಳನುಗ್ಗದಂತೆ ವ್ಯವಸ್ಥೆ ಮಾಡುವಂತೆ ಮನವಿ ಸಲ್ಲಿಸಲಾಗಿದೆ. ಆದರೆ, ಸಮಸ್ಯೆಗೆ ಮಾತ್ರ ಸ್ಪಂದನೆ ಸಿಕ್ಕಿಲ್ಲ. ನಗರದಲ್ಲಿ ಕಳೆದ ನಾಲ್ಕೈದು ದಿನಗಳಿಂದ ಮಳೆ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಶಾಸಕರು, ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಗಂಜಿ ಕೇಂದ್ರವೇನೋ ತೆರೆದಿದ್ದಾರೆ. ಆದರೆ, ನಮಗೆ ಗಂಜಿ ಕೇಂದ್ರಕ್ಕಿಂತ ನೀರು ನುಗ್ಗದಂತೆ ಶಾಶ್ವತ ವ್ಯವಸ್ಥೆ ಕಲ್ಪಿಸಿಕೊಡಬೇಕು. ಇಲ್ಲದಿದ್ದರೆ ನಗರಸಭೆಗೆ ಮುತ್ತಿಗೆ ಹಾಕುವ ಮೂಲಕ ಪ್ರತಿಭಟನೆ ನಡೆಸುವುದಾಗಿ ಬಡಾವಣೆ ಮುಖಂಡರು ಎಚ್ಚರಿಕೆ ನೀಡಿದ್ದಾರೆ.