ರಾಯಚೂರು: ಮುಂಬರುವ ಮಸ್ಕಿ, ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಗಳು ಹಾಗೂ ಬೆಳಗಾವಿ ಲೋಕಸಭಾ ಉಪಚುನಾವಣೆಯಲ್ಲಿ ಗೆಲುವಿಗೆ ಕಾರ್ಯತಂತ್ರ ರೂಪಿಸಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಸಿಂಧನೂರಿನ ಖಾಸಗಿ ಹೋಟೆಲ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಸ್ಕಿ ಬೈ ಎಲೆಕ್ಷಲ್ಗೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್, ಸಚಿವ ವಿ.ಸೋಮಣ್ಣ, ಬಸವಕಲ್ಯಾಣ ಕ್ಷೇತ್ರಕ್ಕೆ ಬಿ.ವೈ.ವಿಜಯೇಂದ್ರ, ಭಗವಂತ ಖೂಬರನ್ನು ಉಸ್ತುವಾರಿಯನ್ನಾಗಿ ನೇಮಕ ಮಾಡಲಾಗಿದೆ ಎಂದರು.
ಪ್ರತಾಪ್‌ಗೌಡ ಪಾಟೀಲ್ ಈ ಹಿಂದೆ ಕಾಂಗ್ರೆಸ್ನಲ್ಲಿ ಇದ್ದಾಗ ಅನುದಾನ ಕೇಳಿದ್ದು, ನೀಡಿರಲಿಲ್ಲ. ಇದೀಗ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಅನುದಾನ ಕೇಳಿದ್ದು, ಬಿಡುಗಡೆ ಮಾಡಲಾಗಿದೆ. ಬೇರೆ ಯಾವ ಕ್ಷೇತ್ರದ ಶಾಸಕರು ಅನುದಾನ ಕೇಳಿದ್ರೂ ಕೂಡ ಅವರಿಗೂ ನೀಡಲಾಗುತ್ತಿದೆ ಎಂದರು.
ಬಿಜೆಪಿಯ ಶಾಸಕರು, ರಮೇಶ್ ಜಾರಕಿಹೊಳಿ ನಡ್ಡಾರವರನ್ನು ಭೇಟಿ ಮಾಡಿರುವುದು ಬಣ ಎನ್ನಲು ಆಗುವುದಿಲ್ಲ. ರಾಜ್ಯಸಭೆಗೆ ಕಳೆದ ಬಾರಿ ಗಸ್ತಿಯವರಿಗೆ ಟಿಕೆಟ್ ನೀಡಲಾಗಿತ್ತು. ಆದ್ರೆ ಅವರು ಅಕಾಲಿಕ ಮರಣ ಹೊಂದಿದ್ರು. ತೆರವಾದ ಸ್ಥಾನಕ್ಕೆ ಸುಮಾ ಗಸ್ತಿ, ಎನ್.ಶಂಕ್ರಪ್ಪಗೆ ಟಿಕೆಟ್ ನೀಡಬೇಕು ಎನ್ನುವ ಒತ್ತಾಯವಿತ್ತು. ಆದ್ರೆ ಕೇಂದ್ರ ಸಮಿತಿ ಸಾಮಾಜಿಕ ನ್ಯಾಯಕ್ಕಾಗಿ ಈಗ ಟಿಕೆಟ್ ನೀಡಿದೆ. ಬಿಜೆಪಿಯಲ್ಲಿ ಮೂಲ ಬಿಜೆಪಿ, ವಲಸಿಗ ಎಂಬ ವಿಚಾರವಿಲ್ಲ. 151 ಶಾಸಕರು ಕೂಡ ಸಚಿವರಾಗಲು ಅರ್ಹರು. ಅದರಲ್ಲಿ ಮೂರು ನಾಲ್ಕು ಬಾರಿ ಆಯ್ಕೆಯಾದ ಶಾಸಕರಿದ್ದಾರೆ. ಕೆಲವು ಮಾನದಂಡಗಳ ಆಧಾರದ ಮೇಲೆ ಸಚಿವ ಸ್ಥಾನ ನೀಡಲಾಗುವುದು ಎಂದರು.