ರಾಯಚೂರು: ನದಿಯಲ್ಲಿ ನೀರಿಲ್ಲದೆ ತನ್ನ ಸ್ವರೂಪವನ್ನ ಕಳೆದುಕೊಂಡಿದ್ದ ಕೃಷ್ಣಾ ನದಿ ಈ ಬಾರಿಯ ಮಹಾಮಳೆಯಿಂದಾಗಿ ಉಕ್ಕಿ ಹರಿಯುತ್ತಿದೆ.
ಜಿಲ್ಲೆಯಲ್ಲಿ ಸುಮಾರು 183 ಕಿಲೋ ಮೀಟರ್ವರೆಗೆ ಹರಿಯುವ ಕೃಷ್ಣಾ ನದಿ ನೀರು ಇಲ್ಲದೆ ಒಣಗಿ ಹೋಗಿತ್ತು. ಆದರೆ ಇದೀಗ ನಾರಾಯಣಪುರ(ಬಸವಸಾಗರ) ಜಲಾಶಯದಿಂದ ಲಕ್ಷ ಕ್ಯೂಸೆಕ್ ನೀರು ಹರಿಬಿಟ್ಟಿರುವುದರಿಂದ ನದಿಯಲ್ಲಿ ನೀರು ಉಕ್ಕಿ ಹರಿಯುತ್ತಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ತನ್ನ ಮೂಲ ಸ್ವರೂಪ ಕಳೆದುಕೊಂಡು ನದಿ ಯಥಾಸ್ಥಿತಿಗೆ ಮರಳಿದೆ.
ಇನ್ನು ನದಿಯ ಮಧ್ಯದಲ್ಲಿ ಅಲ್ಲಲ್ಲಿ ನಿಂತಿದ್ದ ನೀರನ್ನು ಪಡೆಯುವುದಕ್ಕೆ ರೈತರು ಪಂಪ್ಸೆಟ್ ಅಳವಡಿಸಿಕೊಂಡಿದ್ದರು. ನದಿಗೆ ನೀರು ಬಿಟ್ಟಿರುವುದರಿಂದ ಕೆಲ ರೈತರ ಪಂಪ್ಸೆಟ್ಗಳು ನೀರುಪಾಲಾಗಿವೆ. ಅಲ್ಲದೇ ಜಿಲ್ಲೆಯ ದೇವದುರ್ಗ ತಾಲೂಕಿನಿಂದ ರಾಯಚೂರು-ಕಲಬುರಗಿ ಸಂಪರ್ಕ ಕಲ್ಪಿಸುವ ಹೂವಿನ ಹೆಡಗಿ ಸೇತುವೆಯಲ್ಲಿ ಅಧಿಕವಾಗಿ ನೀರು ಹರಿಯುತ್ತಿದ್ದು, ಜಲಾಶಯದಿಂದ ಇನ್ನಷ್ಟು ನೀರು ನದಿಗೆ ಹರಿಬಿಟ್ಟರೆ ಸೇತುವೆ ಮುಳುಗಡೆಯಾಗುವ ಸಾಧ್ಯತೆಯಿದೆ.
ನದಿಯ ನೀರಿನ ಪ್ರಮಾಣ ಅಧಿಕವಾಗಿರುವುದರಿಂದ ಜನರಿಗೆ ಎಚ್ಚರಿಕೆ ನೀಡಲಾಗಿದೆ. ಜತೆಗೆ ನಡುಗಡ್ಡೆ ಪ್ರದೇಶದಲ್ಲಿ ವಾಸಿಸುವ ಜನರಿಗೆ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಸೂಚಿಸಲಾಗಿದೆ. ಇನ್ನು ಮಹಾರಾಷ್ಟ್ರದಲ್ಲಿ ಸುರಿದ ಅಧಿಕ ಮಳೆಯಿಂದಾಗಿ ಜಲಾಶಯಕ್ಕೆ ನೀರಿನ ಒಳಹರಿವಿನ ಪ್ರಮಾಣ ಅಧಿಕವಾಗಿದ್ದು, ಜಲಾಶಯದ ಗೇಟ್ಗಳ ಮೂಲಕ ನದಿಗೆ ಹರಿಬಿಡಲಾಗುತ್ತಿದೆ.