ರಾಯಚೂರು: ಜಿಲ್ಲೆಯಲ್ಲಿ ಪ್ರವಾಹ ಭೀತಿ ಶುರುವಾಗಿದೆ. ನಾರಾಯಣಪುರ ಜಲಾಶಯದಿಂದ ಅಧಿಕ ಪ್ರಮಾಣದ ನೀರು ಕೃಷ್ಣ ನದಿಗೆ ಬಿಡುಗಡೆ ಮಾಡಲಾಗಿದ್ದು, ಪರಿಣಾಮ ನದಿ ಪಾತ್ರದ ಗ್ರಾಮಗಳಿಗೆ ಹಾಗೂ ನಡುಗಡ್ಡೆ ಪ್ರದೇಶದ ನಿವಾಸಿಗಳಿಗೆ ಪ್ರವಾಹ ಭೀತಿ ಶುರುವಾಗಿದೆ.
ನಾರಾಯಣಪುರ ಜಲಾಶಯಕ್ಕೆ ಸಂಜೆ 5 ಗಂಟೆಗೆ 14 ಗೇಟ್‌ಗಳ ಮೂಲಕ 1,04,924 ಕ್ಯೂಸೆಕ್ ನೀರನ್ನು ನದಿಗೆ ಹರಿಸಲಾಗುತ್ತಿದೆ. ಜಲಾಶಯಕ್ಕೆ 95 ಸಾವಿರ ಕ್ಯೂಸೆಕ್ ನೀರು ಒಳ ಹರಿವು ಇದೆ. ಇಷ್ಟೊಂದು ನೀರು ಹರಿದುಬಿಟ್ಟ ಪರಿಣಾಮ ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಶೀಲಹಳ್ಳಿ ಬ್ರಿಡ್ಜ್ ಮುಳಗಡೆ ಭೀತಿ ಎದುರಾಗಿದೆ.
ಈ ಬ್ರಿಡ್ಜ್ ಮುಳಗಡೆಗೊಂಡರೆ ನಡುಗಡ್ಡೆ ಪ್ರದೇಶದ ಜನರಿಗೆ ಸಂಪರ್ಕ ಕಡಿತಗೊಳ್ಳಲಿದೆ. ಅಲ್ಲದೇ, ನದಿಗೆ ಒಳಹರಿವಿನ ಪ್ರಮಾಣ ಹೆಚ್ಚಳವಾದರೆ, ಮತ್ತಷ್ಟು ಹೊರ ಹರಿವು ಕೂಡ ಉಂಟಾಗುವ ಸಾಧ್ಯತೆಯಿದೆ. ಇದರಿಂದ ಪ್ರವಾಹ ಭೀತಿ ಎದುರಾಗಿದ್ದು, ಈಗಾಗಲೇ ನದಿ ಪಾತ್ರ ಜನರಿಗೆ ಜಿಲ್ಲಾಡಳಿತ ಮುನ್ನೆಚ್ಚರಿಕೆ ನೀಡಿದೆ.
ಇದನ್ನೂ ಓದಿ: ಆಲಮಟ್ಟಿಯ 18 ಗೇಟ್‌ಗಳ ಮೂಲಕ ನೀರು ಬಿಡುಗಡೆ; ಹೆಚ್ಚಿದ ಪ್ರವಾಹ ಭೀತಿ