ರಾಯಚೂರು: ಜಿಲ್ಲೆಯ ದೇವದುರ್ಗ ತಾಲೂಕಿನ ಹೇಮನಾಳ, ಶಾವಂತಗೇರಾ ಗ್ರಾಮ ಪಂಚಾಯಿತಿಗಳ ಚುನಾವಣೆ ನಡೆಸುವಂತೆ ಆಗ್ರಹಿಸಿ ಗ್ರಾಮಸ್ಥರು ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟಿಸಿದರು.
ಜಿಲ್ಲೆಯ ದೇವದುರ್ಗ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಹೇಮನಾಳ, ಶಾವಂತಗೇರಾ ಗ್ರಾಪಂ ಚುನಾವಣೆ ಕಳೆದ ಐದು ವರ್ಷಗಳಿಂದ ನಡೆದಿಲ್ಲ. ಇದರಿಂದ ಸರ್ಕಾರದ ಯೋಜನೆಗಳು ಸಮಪರ್ಕವಾಗಿ ಅನುಷ್ಠಾನಗೊಳ್ಳದೆ, ಗ್ರಾಮದಲ್ಲಿ ಜ್ವಲಂತ ಸಮಸ್ಯೆಗಳಿಂದ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಚುನಾವಣೆ ನಡೆಯದಿರುವುದರಿಂದ ಗ್ರಾಪಂ ಆಡಳಿತಾಧಿಕಾರಿಯಾದರೂ ಗ್ರಾಮದಲ್ಲಿ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು. ಆದ್ರೆ ಅಧಿಕಾರಿಗಳು ಸಂಪೂರ್ಣವಾಗಿ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ದೂರಿದರು.
ಓದಿ: ಬೆಂಗಳೂರಿಗೆ ಅಮಿತ್ ಶಾ ಆಪ್ತನ ರಹಸ್ಯ ಭೇಟಿ: ಆರ್ಎಸ್ಎಸ್ ಕಚೇರಿ ಹುಡುಕಲು ಪರದಾಟ
ಕಳೆದ 5 ವರ್ಷಗಳ ಹಿಂದೆ ಗ್ರಾಮ ಪಂಚಾಯಿತಿಗಳ ಕ್ಷೇತ್ರ ಪುನರ್ ವಿಂಗಡಣೆ ಸಂದರ್ಭದಲ್ಲಿ ಹೇಳನಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಶಾವಂತಗೇರಾ ಗ್ರಾಮ ಬರುತ್ತಿತ್ತು. ಮರು ವಿಂಗಡಣೆ ವೇಳೆ ಮಂದರಕಲ್ ಗ್ರಾಮ ಶಾವಂತಗೇರಾ ಪಂಚಾಯಿತಿ ವ್ಯಾಪ್ತಿಗೆ ಸೇರ್ಪಡೆಗೊಂಡಿತ್ತು. ಇದನ್ನ ಪ್ರಶ್ನಿಸಿ ಅಲ್ಲಿಯ ಗ್ರಾಮಸ್ಥರು ನ್ಯಾಯಾಲಯದ ಮೊರೆ ಹೋಗಿ, ತಡೆಯಾಜ್ಞೆ ತಂದಿದ್ದರು.
ಹೇಮನಾಳ, ಶಾವಂತಗೇರಾ ಗ್ರಾ.ಪಂ. ಚುನಾವಣೆಗೆ ಗ್ರಾಮಸ್ಥರ ಒತ್ತಾಯ
ಈ ತಡೆಯಾಜ್ಞೆ ಇತ್ಯರ್ಥಗೊಳಿಸಲು ಅಧಿಕಾರಿಗಳು ಮುಂದಾಗಿ ಪಂಚಾಯಿತಿ ಚುನಾವಣೆ ನಡೆಸಲು ಕ್ರಮ ಕೈಗೊಳ್ಳಬೇಕಾಗಿತ್ತು. ಆದ್ರೆ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಪರಿಣಾಮ ಹೇಮನಾಳ, ಶಾವಂತಗೇರಾ ಗ್ರಾಮ ಪಂಚಾಯಿತಿ ಚುನಾವಣೆ ನಡೆಯುತ್ತಿಲ್ಲ. ಹೀಗಾಗಿ ಈ ಪಂಚಾಯಿತಿ ಚುನಾವಣೆ ನಡೆಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ರು. ಒಂದು ವೇಳೆ ಮನವಿಗೆ ಸ್ಪಂದಿಸದೆ ಇದ್ದರೆ ಹಂತ ಹಂತವಾಗಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.