ರಾಯಚೂರು: ಕೊರೊನಾ ಲಾಕ್ಡೌನ್ನಿಂದ ಕಳೆದ 7 ತಿಂಗಳು ಕಾಲ ಬಂದ್ ಆಗಿದ್ದ ನಗರದ ಮುಖ್ಯ ತರಕಾರಿ ಮಾರುಕಟ್ಟೆಯಾದ ಉಸ್ಮಾನಿಯಾ ಮಾರುಕಟ್ಟೆ ಕೆಲ ಮುಂಜಾಗ್ರತಾ ಕ್ರಮಗಳನ್ನು ಅಳವಡಿಸಿಕೊಳ್ಳುವ ಮೂಲಕ ಇಂದು ಪುನರ್ ಆರಂಭವಾಗಿದೆ.
ಹಂತ ಹಂತದಲ್ಲಿ ವ್ಯಾಪಾರ ಚೇತರಿಕೆ ಕಾಣುತ್ತಿದೆ. ಕಳೆದ 7 ತಿಂಗಳು ಹಿಂದೆ ಕೊರೊನಾ ಹಿನ್ನೆಲೆ ಬಂದ್ ಆಗಿದ್ದ ನಗರದ ಉಸ್ಮಾನಿಯಾ ಮುಖ್ಯ ತರಕಾರಿ ಮಾರುಕಟ್ಟೆ ಪುನರ್ ಪ್ರಾರಂಭಕ್ಕೆ ಜಿಲ್ಲಾಡಳಿತ ಸಮ್ಮತಿಸಿರುವುದಕ್ಕೆ ತರಕಾರಿ ಮಾರಾಟಗಾರರಲ್ಲಿ ಸಂತೋಷ ಇಮ್ಮಡಿಗೊಳಿಸಿದೆ.
ಮುಖ್ಯ ಮಾರುಕಟ್ಟೆಯಲ್ಲಿ ಹೆಚ್ಚು ಜನರು ಸೇರುವುದರಿಂದ ಕೊರೊನಾ ಹರಡುವಿಕೆ ಕಾರಣವಾಗಲಿದೆ ಎಂದು ಮುಂಜಾಗ್ರತಾ ಕ್ರಮವಾಗಿ ಮಾರ್ಚ್ ತಿಂಗಳಲ್ಲಿ ಮುಖ್ಯ ತರಕಾರಿ ಮಾರುಕಟ್ಟೆ ಬಂದ್ ಮಾಡಿ ನಗರದ ಪ್ರಮುಖ 18 ಸ್ಥಳಗಳಲ್ಲಿ ತರಕಾರಿ ಮಾರಾಟಕ್ಕೆ ಅವಕಾಶ ಕಲ್ಪಿಸಿದರು. ಈ ಸ್ಥಳಗಳಲ್ಲಿ ಯಾವುದೇ ರೀತಿಯ ಮೂಲ ಸೌಕರ್ಯಗಳನ್ನ ನೀಡಿದ ಹಿನ್ನೆಲೆ ತರಕಾರಿ ಮಾರಾಟಗಾರರು ಕಳೆದ 7 ತಿಂಗಳು ಬಿಸಿಲು, ಮಳೆ ಲೆಕ್ಕಿಸದೇ ತಮ್ಮಗೆ ನಿಗದಿ ಪಡಿಸಿದ ರಸ್ತೆಯ ಬದಿಯಲ್ಲಿ ವ್ಯಾಪಾರ ನಡೆಸಿದ್ದರು.
ಜಿಲ್ಲೆಯಲ್ಲಿ ನಿತ್ಯ ನೂರಾರು ಕೊರೊನಾ ಪ್ರಕರಣಗಳು ದಾಖಲಾಗುತ್ತಿದ್ದು, ಇಂತಹ ಸಮಯದಲ್ಲಿ ಮಾರುಕಟ್ಟೆ ಪ್ರಾಂಭಿಸಿದರೆ ಪ್ರಕರಣಗಳು ಹೆಚ್ಚಾಗುವ ಆತಂಕದ ಇದೆ. ಈ ನಡುವೆ ಇಂದು ಕೋವಿಡ್ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಮೂಲಕ ತರಕಾರಿ ಮಾರುಕಟ್ಟೆ ಪುನರ್ ಆರಂಭಗೊಂಡಿದೆ.
ತರಕಾರಿ ಮಾರಾಟಗಾರ ಅತಿಕ್ ಮಾತನಾಡಿ, ಕಳೆದ 7 ತಿಂಗಳಲ್ಲಿ ರಸ್ತೆಯ ಬದಿಯಲ್ಲಿ ನಿಂತು ತರಕಾರಿ ಮಾರಾಟ ಮಾಡುವ ಮೂಲಕ ಅನೇಕ ಸಂಕಷ್ಟಗಳನ್ನು ಅನುಭವಿಸಿದ್ದೇವೆ. ಇಂದು ತರಕಾರಿ ಮಾರುಕಟ್ಟೆ ಪುನರ್ ಆರಂಭವಾಗಿರುವುದಕ್ಕೆ ಬಹಳ ಸಂತೋಷವಾಗಿದೆ. ಕೋವಿಡ್ ಮುಂಜಾಗ್ರತಾ ಕ್ರಮಗಳನ್ನು ಅಳವಡಿಸಿಕೊಂಡು ಮೂಲ ಸ್ಥಳದಲ್ಲಿ ವ್ಯಾಪಾರ ನಡೆಸುತ್ತಿದ್ದು, ಮುಂದಿನ ದಿನಗಳಲ್ಲಿ ವ್ಯಾಪಾರ ಚುರುಕು ಕಾಣಲಿದೆ ಎನ್ನುವ ಭರವಸೆ ನಮಗಿದೆ ಎಂದರು.