ರಾಯಚೂರು : ಜಿಲ್ಲೆಯಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡಬೇಕೆಂದು ಹಲವು ದಿನಗಳ ಬೇಡಿಕೆಯಿದೆ. ಈ ಹಿನ್ನೆಲೆ ಸರ್ಕಾರದಿಂದ ಬಿಡುಗಡೆ ಮಾಡಬೇಕಾದ ಅನುದಾನ ನೀಡದ ಪರಿಣಾಮ, ಕೆಕೆಆರ್ಡಿಬಿಯ ವಿಶೇಷ ಅನುದಾನವನ್ನ ಜಿಲ್ಲೆಯ ಶಾಸಕರು ನೀಡಲು ಮುಂದಾಗಿದ್ದಾರೆ.
ರಾಯಚೂರು ನಗರದ ಯರಮರಸ್ ಹೊರವಲಯದಲ್ಲಿರುವ 408 ಎಕರೆ ಭೂಮಿಯನ್ನು ವಿಮಾನ ನಿಲ್ದಾಣ ನಿರ್ಮಾಣಕ್ಕೆ ಹಲವು ವರ್ಷಗಳಿಂದ ಮೀಸಲಿರಿಸಲಾಗಿದೆ. ಆದರೆ, ವಿಮಾನ ನಿಲ್ದಾಣ ಮಾತ್ರ ನಿರ್ಮಾಣವಾಗಿರಲಿಲ್ಲ.
ಇತ್ತೀಚೆಗೆ ಸರ್ಕಾರ ಜಿಲ್ಲೆಯ ವಿಮಾನ ನಿಲ್ದಾಣಕ್ಕೆ ಆಸಕ್ತಿ ತೋರಿಸಿದ್ದು, ಬೆಂಗಳೂರಿನಿಂದ ಬಂದ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು, ಜಿಲ್ಲಾಧಿಕಾರಿ ಹಾಗೂ ಸ್ಥಳೀಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.
ಆದರೆ, ಸರ್ಕಾರ ನಿಲ್ದಾಣಕ್ಕೆ ಅನುದಾನ ಬಿಡುಗಡೆ ಮಾಡಿಲ್ಲ. ಹೀಗಾಗಿ ಕಲ್ಯಾಣ ಕರ್ನಾಟಕದ (ಹೈದರಾಬಾದ್-ಕರ್ನಾಟಕ) ಆರು ಜಿಲ್ಲೆಗಳ ಅಭಿವೃದ್ಧಿಗಾಗಿ ಹೆಚ್ಚಿನ ಅನುದಾನ ನೀಡುವ ಕೆಕೆಆರ್ಡಿಬಿ ಅನುದಾನದಲ್ಲಿ ವಿಮಾನ ನಿಲ್ದಾಣದ ಅನುದಾನವನ್ನ ನೀಡಲು ಜಿಲ್ಲೆಯ ಶಾಸಕರು ನಿರ್ಧಾರಿಸಿದ್ದಾರೆ.
ಕೆಕೆಆರ್ಡಿಬಿ (ಕಲ್ಯಾಣ-ಕರ್ನಾಟಕ ಅಭಿವೃದ್ದಿ ಮಂಡಳಿ) ಮ್ಯಾಕ್ರೋ ಯೋಜನೆಯಡಿ ಬಿಡುಗಡೆಯಾದ 59 ಕೋಟಿ ರೂಪಾಯಿಯನ್ನು ಏರ್ಪೋರ್ಟ್ ನಿರ್ಮಿಸಲು ಶಾಸಕರು ನೀಡಲು ಒಪ್ಪಿಗೆ ನೀಡಿದ್ದಾರೆ.
ಹೀಗಾಗಿ, ಜಿಲ್ಲಾ ಉಸ್ತುವಾರಿ ನೇತೃತ್ವದಲ್ಲಿ ಈ ಸಂಬಂಧ ಸಭೆ ನಡೆಸಿ ತೀರ್ಮಾನ ಕೈಗೊಂಡು, ಹಣಕಾಸು ಇಲಾಖೆ ಅನುಮೋದನೆ ದೊರೆತ ಬಳಿಕ ಕೆಲಸ ಪ್ರಾರಂಭವಾಗಲಿ ಎನ್ನುತ್ತಾರೆ ಶಾಸಕ ಡಾ.ಶಿವರಾಜ್ ಪಾಟೀಲ್. ಇನ್ನು ಕಲ್ಯಾಣ ಕರ್ನಾಟಕದ ಆರು ಜಿಲ್ಲೆಗಳಿಗೆ ಹೊರತು ಪಡಿಸಿ ಬೇರೆ ಜಿಲ್ಲೆಯ ವಿಮಾನ ನಿಲ್ದಾಣಕ್ಕೆ ಸರ್ಕಾರ ಅನುದಾನ ಬಿಡುಗಡೆ ಮಾಡುತ್ತದೆ.
ಆದರೆ, ಕಲ್ಯಾಣ-ಕರ್ನಾಟಕ ಭಾಗದ ಆರು ಜಿಲ್ಲೆಗಳ ಪೈಕಿ ರಾಯಚೂರು ಜಿಲ್ಲೆಯ ವಿಮಾನ ನಿಲ್ದಾಣಕ್ಕೆ ವಿಶೇಷವಾಗಿ ಹೆಚ್ಚುವರಿ ಅನುದಾನ ಬಳಕೆ ಮಾಡಿಕೊಳ್ಳುತ್ತಿದ್ದು, ಸರ್ಕಾರ ವಿಮಾನ ನಿಲ್ದಾಣಕ್ಕೆ ಹೆಚ್ಚುವರಿ ಅನುದಾನ ನೀಡಬೇಕು ಎನ್ನುವುದು ಜಿಲ್ಲೆಯ ಜನರ ಒತ್ತಾಸೆಯಾಗಿದೆ.
ಇದನ್ನೂ ಓದಿ: ರಾಯಚೂರು: ವಿಮಾನ ನಿಲ್ದಾಣಕ್ಕೆ ಮೀಸಲು ಇರಿಸಿದ ಜಾಗದಲ್ಲಿ ಸರ್ವೇ ಕಾರ್ಯ