ರಾಯಚೂರು: ಕೊರೊನಾ ಭೀತಿ ಹಿನ್ನೆಲೆಯಲ್ಲಿ ಭಾನುವಾರದಂದು ಲಾಕ್‌ಡೌನ್ ಜಾರಿ ಮಾಡಲಾಗುವುದು ಎಂದು ಎಸ್ಪಿ ಡಾ.ಸಿ.ವಿ.ವೇದಮೂರ್ತಿ ತಿಳಿಸಿದ್ದಾರೆ.
ಜು.4 ರಾತ್ರಿ 8 ಗಂಟೆಯಿಂದ ಜು.6 ಬೆಳಗ್ಗೆ 5 ಗಂಟೆಯವರೆಗೆ ಲಾಕ್‌ಡೌನ್ ಮಾಡಲಾಗುವುದು. ಈ ವೇಳೆ, ಸಾರ್ವಜನಿಕರು ಓಡಾಡುವಂತಿಲ್ಲ. ಕೇವಲ ತುರ್ತು ಸೇವೆಗಳಾದ ವೈದ್ಯಕೀಯ, ಮೆಡಿಕಲ್ ಶಾಪ್‌ಗಳನ್ನ ತೆರೆಯುವುದಕ್ಕೆ ಅವಕಾಶವಿದೆ ಹಾಗೂ ತುರ್ತು ಸೇವೆಯವರು, ಅಗತ್ಯ ವಸ್ತುಗಳ ಪೂರೈಸುವ ಗೂಡ್ಸ್ ವಾಹನಗಳು ಮಾತ್ರ ಓಡಾಡಬಹುದಾಗಿದೆ. ಉಳಿದಂತೆ ಸಾರ್ವಜನಿಕರು ಸಂಚರಿಸುವುದು, ಓಡಾಡುವುದು ಕಂಡು ಬಂದಲ್ಲಿ, ನಿರ್ಧಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಲಾಕ್‌ಡೌನ್ ಜಾರಿಯಾಗುವುದರಿಂದ ಜಿಲ್ಲಾದ್ಯಂತ 144 ಸೆಕ್ಷನ್ ಜಾರಿ ಮಾಡಲಾಗಿದ್ದು, 4ಕ್ಕಿಂತ ಹೆಚ್ಚು ಜನರು ತಿರುಗಾಡುವಂತಿಲ್ಲ. ಗುಂಪು ಗುಂಪಾಗಿ ಕಂಡು ಬಂದಲ್ಲಿ ಶಿಸ್ತಿನ ಕ್ರಮ ಕೈಗೊಳ್ಳಲಾಗುವುದು. ಇದಕ್ಕಾಗಿ ಜಿಲ್ಲಾದ್ಯಂತ 10 ಡಿಎಆರ್, 500 ಪೊಲೀಸ್ ಕಾನ್ಸ್ಟೇಬಲ್ಗಳು, 40 ಪಿಎಸ್‌ಐ, 10 ಸಿಪಿಐ, 4 ಡಿವೈಎಸ್ಪಿಗಳು ಹಾಗೂ ಇಬ್ಬರು ಎಸ್ಪಿ ನೇತೃತ್ವದಲ್ಲಿ ಸೂಕ್ತ ಬಂದೋಬಸ್ತ್ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.