ರಾಯಚೂರು: ಉದ್ಯೋಗ ಅರಸಿ ಬೆಂಗಳೂರಿಗೆ ಬಂದಿದ್ದ ಲಿಂಗಸುಗೂರು ತಾಲ್ಲೂಕಿನ ಐದಭಾವಿ ಗ್ರಾಮದ ಯುವಕನೋರ್ವ ಚರಂಡಿಯೊಳಗಡೆ ಬಿದ್ದು ಮೃತಪಟ್ಟಿದ್ದು, ಆತನ ಮೃತದೇಹದಿಂದ ಗಂಟಲು ದ್ರವ ಸಂಗ್ರಹಿಸಲಾಗಿದೆ.
ಬೆಂಗಳೂರಿನ ಬಹುತೇಕ ಭಾಗಗಳಲ್ಲಿ ಕೋವಿಡ್-19 ಅಟ್ಟಹಾಸ ಹೆಚ್ಚಾಗಿರುವುದರಿಂದ ರಾಯಚೂರು ಜಿಲ್ಲಾಡಳಿತ ಮುನ್ನೆಚ್ಚರಿಕಾ ಕ್ರಮವಾಗಿ ಭಾನುವಾರ ಮೃತನ ಗಂಟಲು ದ್ರವ ಸಂಗ್ರಹಿಸಿದೆ. ಬಳಿಕ ಐದಭಾವಿ ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಸಲಾಗಿದೆ.
ನರಸಪ್ಪ ಕಂಠೆಪ್ಪ ವೀರಗೋಟ ಮೃತ ಯುವಕ. ಶುಕ್ರವಾರ ಬೆಂಗಳೂರು ದಕ್ಷಿಣ ಭಾಗದ ರಾಮನಗರ ಜಿಲ್ಲೆ ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ಸಿಆರ್‌ಪಿ ಕಲಂ 174ರ ಅಡಿ ಪ್ರಕರಣ ದಾಖಲಿಸಿ, ಮರಣೋತ್ತರ ಪರೀಕ್ಷೆ ಮಾಡಿ ಮೃತದೇಹ ತರಲಾಗಿತ್ತು.