ರಾಯಚೂರು: ಕಲ್ಯಾಣ ಕರ್ನಾಟಕ ಹಾಗೂ ಮುಂಬೈ ಕರ್ನಾಟಕ ಭಾಗದಿಂದ ಪ್ರಮುಖ ಪಕ್ಷದಿಂದ ಕೆಲ ಮುಖಂಡರು ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಲಿದ್ದಾರೆ ಎಂದು ಸಣ್ಣ ನೀರಾವರಿ ಖಾತೆ ಸಚಿವ ಎನ್.ಎಸ್.ಬೋಸರಾಜು ಹೇಳಿದ್ದಾರೆ.
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಆಪರೇಷನ್ ಹಸ್ತ ವಿಚಾರವಾಗಿ ರಾಯಚೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ತತ್ವ, ಸಿದ್ಧಾಂತ ಒಪ್ಪಿಕೊಂಡು ಯಾರು ಕಾಂಗ್ರೆಸ್ ಪಕ್ಷಕ್ಕೆ ಬರ್ತಾರೋ ಅವರೆಲ್ಲರಿಗೂ ಸ್ವಾಗತವಿದೆ. ಬಹಳಷ್ಟು ಜನ ಈಗಾಗಲೇ ನಮ್ಮ ರಾಜ್ಯ ನಾಯಕರ ಜೊತೆ ಸಂಪರ್ಕದಲ್ಲಿದ್ದು, ಅವರಲ್ಲಿ ಯಾರು ಬರುವರಿದ್ದಾರೆ ಎನ್ನುವುದನ್ನು ನಾನು ಬಹಿರಂಗವಾಗಿ ಹೇಳಲು ಸಾಧ್ಯವಿಲ್ಲ. ಹೆಸರುಗಳು ಬಹಿರಂಗವಾದರೆ ನಿರ್ಧಾರ ತೆಗೆದುಕೊಳ್ಳಲು ಅವರಿಗೆ ಗೊಂದಲ ಆಗಬಹುದು ಎಂದರು.
ರಾಯಚೂರು ಮಾಜಿ ಸಂಸದ ಮತ್ತು ಬಿಜೆಪಿ ಮುಖಂಡ ಬಿ.ವಿ.ನಾಯಕ, ಮಾಜಿ ಶಾಸಕ ಪ್ರತಾಪ್ ಗೌಡ ಕಾಂಗ್ರೆಸ್ ಪಕ್ಷ ಸೇರ್ಪಡೆ ವಿಚಾರ ನನಗೆ ಗೊತ್ತಿಲ್ಲ. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನಗಳಲ್ಲಿ ಗೆಲವು ಸಾಧಿಸಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯದ ವಿಧಾನಸಭೆ ಚುನಾವಣೆಯಲ್ಲಿ ಮೋದಿ ಪ್ರಚಾರಕ್ಕೂ ಬಂದರೂ ಫೇಲಾದರು. ಈಗ ಬರುವ ನಾಯಕರಲ್ಲಿ ಮುಂದಿನ ದಿನಗಳಲ್ಲಿ ರಾಜಕೀಯ ತೊಂದರೆ ಇದೆ ಎನ್ನುವುದು ಅವರ ಮನಸ್ಸಿನಲ್ಲಿ ಬಂದಿದೆ. ಹೀಗಾಗಿ ಮೈಸೂರು, ಕಲ್ಯಾಣ, ಮುಂಬೈ ಭಾಗದಿಂದಲೂ ಪ್ರಮುಖ ಪಕ್ಷದಿಂದ ಹಲವಾರು ಮುಖಂಡರು ಕಾಂಗ್ರೆಸ್ಗೆ ಬರುವುದು ಖಚಿತ ಎಂದು ವಿವರಣೆ ನೀಡಿದರು.
ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್ನಲ್ಲಿ ತಯಾರಿ ನಡೆಯುತ್ತಿದೆ. ಆಯಾ ರಾಜ್ಯದ ಜವಾಬ್ದಾರಿಯನ್ನೂ ಕಾಂಗ್ರೆಸ್ ಹಿರಿಯ ಮುಖಂಡರಿಗೆ ಹಂಚಿಕೆ ಮಾಡಲಾಗಿದೆ. ಭಾರತ ಜೋಡೊ ರ್ಯಾಲಿ ತೆಲಂಗಾಣ, ಕರ್ನಾಟಕದಲ್ಲಿ ಅದ್ಧೂರಿಯಾಗಿ ನಡೆದಿತ್ತು. ತೆಲಂಗಾಣದಲ್ಲಿ ಸ್ಥಳೀಯ ಪಕ್ಷ ಹಾಗೂ ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ನಡುವೆ ತೀವ್ರ ಪೈಪೋಟಿ ಇದೆ. ಇಲ್ಲಿ ಬಿಜೆಪಿ ಪ್ರಯತ್ನ ಮಾಡಿದರೂ, ಜೀರೊ ಆಗಿದೆ ಎಂದು ವ್ಯಂಗ್ಯವಾಡಿದರು.
ಶಿಕ್ಷಕರ ವರ್ಗಾವಣೆ ವಿಚಾರ: ಜಿಲ್ಲೆಯಿಂದ ಬಹಳಷ್ಟು ಶಿಕ್ಷಕರ ವರ್ಗಾವಣೆಯಾಗಿರುವ ಮಾಹಿತಿ ನನ್ನ ಗಮನಕ್ಕೂ ಬಂದಿದೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ ಜೊತೆಗೆ ಚರ್ಚಿಸಿದ್ದು, ಅವರು ಹತ್ತು ವರ್ಷದ ಬಳಿಕ ನಿಯಮದ ಪ್ರಕಾರ ವರ್ಗಾವಣೆಗೊಂಡಿದ್ದಾರೆ. ಅದರ ಬದಲಾಗಿ ಶಿಕ್ಷಕರನ್ನು ನೇಮಿಸುವ ವ್ಯವಸ್ಥೆ ಮಾಡಲಾಗುವುದೆಂದು ಭರವಸೆ ನೀಡಿದ್ದಾರೆ ಎಂದು ಸಚಿವ ಎನ್.ಎಸ್.ಬೋಸರಾಜು ತಿಳಿಸಿದರು.
ಇದನ್ನೂ ಓದಿ: ಯಾರೂ ಪಕ್ಷ ಬಿಟ್ಟು ಹೋಗಲ್ಲ, ಮೈತ್ರಿ ಉಳಿಸಿಕೊಳ್ಳುವಲ್ಲಿ ಕಾಂಗ್ರೆಸ್ ವಿಫಲ: ಪ್ರಹ್ಲಾದ್ ಜೋಶಿ