ರಾಯಚೂರು : ಜಿಲ್ಲೆಯಲ್ಲಿ ಲಾಕ್ಡೌನ್ನಿಂದಾಗಿ ಆರ್ಕೇಸ್ಟ್ರಾ ಕಲಾವಿದರ ಬದುಕು ತುಂಬಾ ಶೋಚನೀಯವಾಗಿದೆ ಎಂದು ಹಿರಿಯ ಕಲಾವಿದರಾದ ವೆಂಕಟೇಶ್ ಆಲ್ಕೋಡ್ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ತಮ್ಮದೇ ಆದ ತಂಡವನ್ನ ಮಾಡಿಕೊಂಡು ಮದುವೆ ಸಮಾರಂಭಗಳಲ್ಲಿ ಹಾಡುಗಳನ್ನ ಹಾಡುವ ಮೂಲಕ ಬರುವ ಆದಾಯದಿಂದ ಜೀವನ ನಡೆಸಲಾಗುತ್ತಿತ್ತು.
ಮಾರ್ಚ್, ಏಪ್ರೀಲ್ ಹಾಗೂ ಮೇ ತಿಂಗಳಲ್ಲಿ ಶುಭ ಕಾರ್ಯಗಳು ಹೆಚ್ಚಾಗಿ ನಡೆಯುತ್ತವೆ. ಮುಖ್ಯವಾಗಿ ವಿವಾಹ ಮಹೋತ್ಸವ ಬಹಳಷ್ಟು ಇರುತ್ತವೆ. ಈ ವಿವಾಹ ಮಹೋತ್ಸವಕ್ಕೆ ಬರುವವರಿಗೆ ಮನ ತಣಿಸಲು ಮನೋರಂಜನೆಗಾಗಿ ಆರ್ಕೆಸ್ಟ್ರಾ ಮಾಡಿಸಲಾಗುತ್ತಿತ್ತು. ಈ ಮೂಲಕ ಕಲಾವಿದರ ಜೀವನ ಸಾಗುತ್ತಿತ್ತು. ಆದರೆ, ಇದೀಗ ಮದುವೆಗಳಿಗೆ ಬ್ರೇಕ್ ಬಿದ್ದಿರುವ ಪರಿಣಾಮ ಕಲಾವಿದರಿಗೆ ಜೀವನೋಪಾಯಕ್ಕೆ ತೊಂದರೆ ಉಂಟಾಗಿದೆ.
ರಾಯಚೂರು ಜಿಲ್ಲೆಯೊಂದರಲ್ಲಿ ಸುಮಾರು 15 ಆರ್ಕೆಸ್ಟ್ರಾ ತಂಡಗಳು ಇವೆ. ಒಂದು ತಂಡದಲ್ಲಿ ಸುಮಾರು ಹತ್ತಕ್ಕೂ ಹೆಚ್ಚು ಕಲಾವಿದರು ಇರುತ್ತಾರೆ. ಕಾರ್ಯಕ್ರಮಕ್ಕೆ ಇಂತಿಷ್ಟು ನಿಗದಿ ಮಾಡಿಕೊಂಡಿದ್ದು, ಕಾರ್ಯಕ್ರಮದಿಂದ ಬಂದ ಹಣದಲ್ಲಿ ತಂಡದ ಸದಸ್ಯರೆಲ್ಲರೂ ಹಂಚಿಕೊಳ್ಳುತ್ತಾರೆ. ಆದರೆ, ಹೆಮ್ಮಾರಿಯಂತೆ ಕಾಡುತ್ತಿರುವ ಕೊರೊನಾ ವೈರಸ್ ಭೀತಿಯಿಂದ ಮದುವೆ, ಸಭೆ, ಸಮಾರಂಭಗಳಿಗೆ ಅವಕಾಶವಿಲ್ಲ. ಇತ್ತ ಕಲಾವಿದರಿಗೆ ಯಾವುದೇ ಕಾರ್ಯಕ್ರಮ ನಡೆಸಲು ಸಾಧ್ಯವಿಲ್ಲದೆ ಸಂಕಷ್ಟದಲ್ಲಿದ್ದಾರೆ ಎಂದು ವೆಂಕಟೇಶ್ ಆಲ್ಕೋಡ್ ಹೇಳುತ್ತಾರೆ.