ರಾಯಚೂರು: ''ಕಾಂಗ್ರೆಸ್ ಇಲ್ಲಿಯವರೆಗೂ ಒಡೆದಾಳುವ ನಿಯಮ ಅನುಸರಿಸಿಕೊಂಡು ಬಂದಿದೆ'' ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಳಿ ನಡೆಸಿದರು. ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ತಿಂಥಿಣಿ ಬ್ರಿಡ್ಜ್ ಬಳಿ ಶ್ರೀಕಾಗಿನೆಲೆ ಕನಕಗುರು ಪೀಠದಲ್ಲಿ ಇಂದಿನಿಂದ ಮೂರು ದಿನಗಳ ಆಯೋಜಿಸಿರುವ ಹಾಲುಮತ ಸಂಸ್ಕೃತಿ ವೈಭವ ಹಿನ್ನೆಲೆಯಲ್ಲಿ ಮಠಕ್ಕೆ ಭೇಟಿ ನೀಡಿದರು.
ಈ ಕಾರ್ಯಕ್ರಮಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ರಾಮಮಂದಿರ ಹೋರಾಟದ ಸಂದರ್ಭದಲ್ಲಿ ಅಮಾಯಕ ಹಿಂದೂಗಳ ಮೇಲೆ ಅನಗತ್ಯ ಲಾಠಿ ಚಾರ್ಜ್, ಗೋಲಿಬಾರ್ ಮಾಡಿಸಿದ್ದು ಕಾಂಗ್ರೆಸ್ನವರು. ನೀವು ವೋಟ್ ಬ್ಯಾಂಕ್ ರಾಜಕಾರಣವನ್ನು ನಿರಂತರವಾಗಿ ಮಾಡುತ್ತಲೇ ಬರುತ್ತಿದ್ದೀರಿ'' ಎಂದು ಅವರು ಕಿಡಿಕಾರಿದರು.
''ರಾಮಮಂದಿರದ ಭೂಮಿ ಪೂಜೆ ನೆರವೇರಿಸಿದ್ದ ದಿನವೇ, ಜನವರಿ 22 ರಂದು ಉದ್ಘಾಟನೆ ಮಾಡಲಾಗುವುದು ಎಂದು ಮೊದಲೇ ತೀರ್ಮಾನ ಆಗಿದೆ. ಜನ್ಮಭೂಮಿ ಟ್ರಸ್ಟ್ನವರು ತಿಳಿಸಿದ್ದಾರೆ. ಅದು ಅಪೂರ್ಣ ಇದೆ ಎನ್ನವುದು ಕಾಂಗ್ರೆಸ್ ಪಕ್ಷದವರಿಗೆ ಹೇಗೆ ಗೊತ್ತಿದೆ. ಗರ್ಭಗುಡಿ ರಾಮಲಲ್ಲಾನ ಮೂರ್ತಿ ಪ್ರತಿಷ್ಠಾಪನೆ ಹಿನ್ನೆಲೆ ಆದಷ್ಟು ಬೇಗ ಅಲ್ಲಿನ ಕೆಲಸ ಮುಗಿಯುತ್ತದೆ'' ಎಂದು ತಿಳಿಸಿದರು.
''ಕಾಂಗ್ರೆಸ್ ಪಕ್ಷವು ತುಷ್ಠೀಕರಣದ ರಾಜಕಾರಣ ಮಾಡುತ್ತಿದೆ. ಸೋಮನಾಥ ಮಂದಿರ ಉದ್ಘಾಟನೆ ಆಗಬೇಕಾದರೆ ಏನು ಮಾಡಿದ್ರು, ಅಂದಿನ ರಾಷ್ಟ್ರಪತಿಗಳನ್ನು ದೇವಸ್ಥಾನದ ಉದ್ಘಾಟನೆಗೆ ಹೋಗಬಾರದು ಎಂದಿದ್ದರು. ಕಾಂಗ್ರೆಸ್ ಪಕ್ಷದ ಮೆಂಟಾಲಿಟಿ ಹೇಗಿದೆ ಅಂದ್ರೆ, ರಾಮ ಕಾಲ್ಪನಿಕ ವ್ಯಕ್ತಿ ಅನ್ನೋದು. ಕರಸೇವಕರ ಮೇಲೆ ಕೇಸ್ ಹಾಕಿದ್ದು, ಗೋಲಿಬಾರ್ ಮಾಡಿದ್ದು ಯಾರು? ಕಾಂಗ್ರೆಸ್ ಪಕ್ಷ ಎಂದಿಗೂ ಹಿಂದೂ ವಿರೋಧ ನೀತಿಯನ್ನು ಅನುಸರಿಸುತ್ತದೆ. ಕಾಂಗ್ರೆಸ್ನವರು ತುಷ್ಟೀಕರಣದ ಆರೋಪಗಳನ್ನು ಮಾಡುತ್ತಾ ಬಂದಿದ್ದಾರೆ. ಕಾಂಗ್ರೆಸ್ ಪಕ್ಷದ ಕಪೋಲ ಕಲ್ಪಿತ ಆರೋಪಗಳಿಗೆ ನಾನು ಉತ್ತರ ಕೊಡುವುದಿಲ್ಲ'' ಎಂದು ಕಿಡಿಕಾರಿದರು.
ಲೊಕಸಭೆ ಚುನಾವಣೆಯಲ್ಲಿ ಯುವಕರಿಗೆ ಆದ್ಯತೆ ನೀಡಬೇಕು ಎನ್ನುವ ವಿಚಾರಕ್ಕೆ ಪ್ರತಿಕ್ರಿಯಿಸಿ, ''ರಾಜ್ಯಾಧ್ಯಕ್ಷರು ವೈಯಕ್ತಿಕವಾಗಿ ಅಭಿಪ್ರಾಯ ಸಂಗ್ರಹಿಸಿದ್ದಾರೆ. ನಿನ್ನೆ, ಮೊನ್ನೆ ನಡೆದ ಸಭೆಯಲ್ಲಿ ನಾನು ಭಾಗವಹಿಸಿದ್ದೆ. ಆ ಸಭೆಯಲ್ಲಿ ಟಿಕೆಟ್ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ. ಮಾಧ್ಯಮದಲ್ಲಿ ಬರುತ್ತಿರುವುದೆಲ್ಲ ಕೇವಲ ಊಹಾಪೋಹ'' ಎಂದರು.
ಗಣರಾಜ್ಯೋತ್ಸವಕ್ಕೆ ರಾಜ್ಯದ ಸ್ತಬ್ಧ ಚಿತ್ರ ನಿರಾಕರಿಸಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ''ಪ್ರತಿವರ್ಷ ಎಲ್ಲ ರಾಜ್ಯಗಳಿಗೂ ಅವಕಾಶ ಸಿಗುವುದಿಲ್ಲ. ಇದರಿಂದ ಕೆಲವು ಸ್ತಬ್ಧ ಚಿತ್ರಗಳನ್ನು ಕೈಬಿಡಲಾಗುತ್ತದೆ. 14 ವರ್ಷದಲ್ಲಿ 10 ಬಾರಿಗೂ ಅತಿಹೆಚ್ಚು ಅವಕಾಶ ಸಿಕ್ಕಿದೆ. ನಾವೇ ಹೆಚ್ಚು ಬಾರಿ ಅವಕಾಶ ಕೊಟ್ಟಿದ್ದೇವೆ. ಬಿಜೆಪಿ ಸರ್ಕಾರ ಇದ್ದಾಗಲೇ ಅವಕಾಶ ಲಭಿಸಿದೆ'' ಎಂದು ವಿವರಿಸಿದರು.
ಸ್ತಬ್ಧ ಚಿತ್ರಗಳ ಆಯ್ಕೆಗಾಗಿಯೇ ಒಂದು ಸಮಿತಿ ಇದೆ ಅದು ಸಾಮಾನ್ಯವಾಗಿ 40 ರಿಂದ 50ರಷ್ಟು ರಾಜ್ಯಗಳನ್ನು ಮಾತ್ರ ಆಯ್ಕೆ ಮಾಡುತ್ತದೆ. ಆಯ್ಕೆ ಮಾಡುವ ಸಂದರ್ಭದಲ್ಲಿ ರಾಜ್ಯಕ್ಕೆ 10 ಬಾರಿ ಅವಕಾಶ ಸಿಕ್ಕಿದೆ. ನಮ್ಮ ರಾಜ್ಯ ಆಯ್ಕೆಯಾದಾಗ ಬೇರೆ ರಾಜ್ಯಕ್ಕೂ ಸಿಕ್ಕಿಲ್ಲ. ಈ ಬಾರಿ ಅವಕಾಶ ಸಿಕ್ಕವರಿಗೆ ಮುಂದಿನ ವರ್ಷ ಸಿಗೋದಿಲ್ಲ. ಇದು ಸಾಮಾನ್ಯ ಪ್ರಕ್ರಿಯೆ, ಎಲ್ಲದರಲ್ಲೂ ರಾಜಕಾರಣ ಮಾಡುವುದು ಸರಿಯಲ್ಲ. ಪ್ರತಿಯೊಂದು ವಿಚಾರದಲ್ಲಿ ಜನರನ್ನು ತಪ್ಪುದಾರಿಗೆ ಎಳೆಯುವುದು ಆಗುವುದಿಲ್ಲ ಸಿದ್ದರಾಮಯ್ಯನವರೇ'' ಎಂದ ಅವರು, ಟೆಕ್ನಾಲಜಿ ಬೆಳೆದಿದೆ ಯಾವುದು ಸತ್ಯ ಅನ್ನೋದನ್ನು ಜನ ಅಂಗೈಯಲ್ಲಿ ತಿಳಿದುಕೊಳ್ಳುತ್ತಾರೆ'' ಎಂದು ಕಿಡಿಕಾರಿದರು.
ಇದನ್ನೂ ಓದಿ: ಜ.22 ರಂದು ರಾಜ್ಯದ ರಾಮಮಂದಿರಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರು ವಿಶೇಷ ಪೂಜೆ ಸಲ್ಲಿಸಲಿದ್ದಾರೆ: ಸಿಎಂ