ರಾಯಚೂರು: ಆಂಧ್ರ ಪ್ರದೇಶದ ಭಾಗವಾಗಿರುವ ಮಂತ್ರಾಲಯವನ್ನು ಕರ್ನಾಟಕ ರಾಜ್ಯಕ್ಕೆ ಸೇರಿಸುವಂತೆ ಟಿಡಿಪಿ ಮುಖಂಡ ತಿಕ್ಕಾರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂತ್ರಾಲಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಂಧ್ರ ರಾಜ್ಯದ ಅಭಿವೃದ್ಧಿಗಾಗಿ ಮೂರು ರಾಜಧಾನಿಗಳನ್ನು ಮಾಡುವ ಉದ್ದೇಶಕ್ಕೆ ಸಮಿತಿ ರಚನೆ ಮಾಡಲಾಗಿದೆ. ಇದಕ್ಕೆ ಕರ್ನೂಲ್ ಜಿಲ್ಲೆಯ ಮಂತ್ರಾಲಯದ ಜನರ ವಿರೋಧವಿದೆ. ಒಂದು ರಾಜಧಾನಿಗೆ ಗತಿಯಿಲ್ಲ, ಹಾಗಿದ್ದ ಮೇಲೆ ಮೂರು ರಾಜಧಾನಿ ಮಾಡುವ ಅವಶ್ಯಕತೆ ಏನಿದೆ? ಎಂದು ಪ್ರಶ್ನಿಸಿದರು.
ವಿಶಾಖಪಟ್ಟಣಂ ರಾಜಧಾನಿ ಮಾಡುವುದಾದರೆ, ನಮ್ಮನ್ನು ಕರ್ನಾಟಕ ರಾಜ್ಯಕ್ಕೆ ಸೇರಿಸಿ ಬಿಡಿ ಎಂದು ಒತ್ತಾಯಿಸಿದ್ದಾರೆ. ಯಾಕಂದ್ರೆ ಮಂತ್ರಾಲಯದಿಂದ ವಿಶಾಖಪಟ್ಟಣಂಗೆ ತೆರಳಲು 2 ದಿನ ಬೇಕು. ಅದರ ಬದಲಿಗೆ ಬೆಂಗಳೂರೇ ಹತ್ತಿರವಾಗುತ್ತದೆ, ಅಲ್ಲದೇ ರಾಯಚೂರಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡಿಗರರು ಸಹ ನೆಲೆಸಿದ್ದಾರೆ ಎಂದರು.
ನಾವು ಆಂಧ್ರದಲ್ಲಿ ಇದ್ದರೂ ನಮ್ಮ ಭಾಷೆ ಇಂದಿಗೂ ಕನ್ನಡವಾಗಿದೆ. ಜನ ಕೇಳುತ್ತಿರುವುದು ರಾಜಧಾನಿಯಲ್ಲ, ಬದಲಿಗೆ ಅಭಿವೃದ್ಧಿ. ಜೊತೆಗೆ ರೈತರಿಗೆ ನೀರು ಕೊಡಿ ಸಾಕು. ಈಗಾಗಲೇ ಮೂರು ರಾಜಧಾನಿಗಳು ಬದಲಾಗಿವೆ, ಕರ್ನೂಲ್, ಹೈದ್ರಾಬಾದ್, ಅಮರಾವತಿ. ಇದೀಗ ವಿಶಾಖಪಟ್ಟಣಂ ಎಂದು ಹೇಳುತ್ತಿದ್ದೀರಿ. ಹೀಗಾಗಿ ಮಂತ್ರಾಲಯವನ್ನು ಕರ್ನಾಟಕಕ್ಕೆ ಸೇರಿಸಿ ನೆಮ್ಮದಿಯಾಗಿ ಇರುತ್ತೇವೆ ಎಂದು ಒತ್ತಾಯಿಸುವ ಮೂಲಕ ಜಗನ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಮಂತ್ರಾಲಯದಲ್ಲಿ ಪ್ರತಿಭಟನೆ ನಡೆಸುವ ಮೂಲಕ ವಿಶಾಖಪಟ್ಟಣಂ ರಾಜಧಾನಿಗೆ ವಿರೋಧ ವ್ಯಕ್ತಪಡಿಸಿದ್ರು.