ಲಿಂಗಸುಗೂರು (ರಾಯಚೂರು): ವೀಕೆಂಡ್ ಕರ್ಫ್ಯೂ ಪ್ರತ್ಯೇಕ ಮಾರುಕಟ್ಟೆಗೆ ಪುರಸಭೆ ತೆರಿಗೆ ವಸೂಲಿ ಮಾಡುತ್ತಿರುವುದರಿಂದ ರೈತರು, ವ್ಯಾಪಾರಸ್ಥರು ಸಾಮೂಹಿಕವಾಗಿ ಆಕ್ರೋಶ ವ್ಯಕ್ತಪಡಿಸಿದರು.
ಕೊರೊನಾ ಸೋಂಕು ತಡೆಗೆ ಸರ್ಕಾರ ವಾರದ ಸಂತೆ ರದ್ದುಪಡಿಸಿದೆ. ನಾಗರಿಕರ ಅನುಕೂಲಕ್ಕೆ ಸರ್ಕಾರಿ ಕಾಲೇಜು ಮೈದಾನದಲ್ಲಿ ತರಕಾರಿ, ಹಣ್ಣು ಇತರ ಅವಶ್ಯಕ ವಸ್ತುಗಳ ಮಾರಾಟಕ್ಕೆ ಅನುಕೂಲ ಕಲ್ಪಸಲಾಗಿದೆ. ಆದರೆ, ಪುರಸಭೆ ಸಿಬ್ಬಂದಿ ಮನಸೋ ಇಚ್ಛೆ ತೆರಿಗೆ ವಸೂಲಿ ಮಾಡುತ್ತಿದೆ. ಅದು ರಶೀದಿ ನೀಡದಿರುವುದು ವ್ಯಾಪಕ ಟೀಕೆಗೆ ಗುರಿಯಾಗಿದೆ.
ವೀಕೆಂಡ್ ವ್ಯಾಪಾರಕ್ಕೆ ಕೇವಲ 4 ತಾಸು ಅವಕಾಶ ನೀಡಿ ತೆರಿಗೆ ವಸೂಲಿ ಮಾಡುತ್ತಿದ್ದಾರೆ. ಮಾರುಕಟ್ಟೆ ವ್ಯವಸ್ಥೆ ಮಾಡಿರದೇ ಹೋಗಿದ್ದರಿಂದ ಗ್ರಾಹಕರ ಸಂಖ್ಯೆ ಕ್ಷೀಣವಾಗಿದೆ. ಇಂತಹುದರಲ್ಲಿ ಮನಸೋ ಇಚ್ಛೆ ತೆರಿಗೆ ವಸೂಲಿ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಬೀದಿ ಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಮೆಹಬೂಬ್ ಪಾಷಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.