ರಾಯಚೂರು: ತಾಲೂಕಿನಲ್ಲಿ ಅಕ್ರಮ ಮರಳುಗಾರಿಕೆಯನ್ನ ನಿಯಂತ್ರಿಸಲು ಮರಳು ಸಮಿತಿ ಸೂಚಿಸಿದಂತೆ ಹೊಸ ಮರಳು ನೀತಿ ಅನುಸಾರ ಕ್ರಮ ಜರುಗಿಸಲು ಜಿಲ್ಲಾ ಸಹಾಯಕ ಆಯುಕ್ತ ಸಂತೋಷ ಕಾಮಗೌಡ ಸೂಚಿಸಿದರು.
ಜಿಲ್ಲೆಯ ದೇವದುರ್ಗದ ತಹಶೀಲ್ದಾರ್ ಕಚೇರಿಯಲ್ಲಿ ತಾಲೂಕು ಮಟ್ಟದ ಮರಳುಗಾರಿಕೆ ನಿಯಂತ್ರಣ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರತೀ ಕಂದಾಯ ನಿರೀಕ್ಷಕರು ಕನಿಷ್ಠ 10ರಿಂದ 15 ವಾಹನಗಳ ತಪಾಸಣೆ ಮತ್ತು ಅಕ್ರಮ ಕಂಡು ಬಂದಲ್ಲಿ ಜಪ್ತಿ ಮಾಡಬೇಕು. ಪಿಡಿಒಗಳು ಸಹ ಕನಿಷ್ಠ 20-30 ವಾಹನಗಳನ್ನು ತಡೆದು, ತಪಾಸಣೆ ಮಾಡಿ ದಂಡ ಮತ್ತು ಕಾನೂನು ಕ್ರಮ ಜರುಗಿಸಲು ಸೂಚಿಸಿದರು.
ಎಲ್ಲಾ ಚೆಕ್ ಪೋಸ್ಟ್ಗಳಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಿಕೊಂಡು ತಾಲೂಕು ಅಧಿಕಾರಿಗಳು ತಮ್ಮ ಕಚೇರಿಯ ಮೂಲಕವೇ ನಿರಂತರವಾಗಿ ಅಕ್ರಮ ಮರಳು ಸಾಗಾಟ ತಡೆಯಲು ವಾಹನಗಳ ಮೇಲೆ ನಿಗಾ ಇಡಬೇಕು. ಈ ಐಪಿಸಿಸಿ ಕ್ಯಾಮರಾಗಳ ಅಳವಡಿಕೆಗೆ ಡಿಎಂಎಫ್ ನಿಧಿಯ ಬಳಕೆ ಮಾಡಲು ಜಿಲ್ಲಾ ಸಮಿತಿಗೆ ಶಿಫಾರಸು ಮಾಡಲು ಸಭೆಯಲ್ಲಿ ತೀರ್ಮಾನಿಸಲಾಯಿತು.