ರಾಯಚೂರು: ಕೊರೊನಾ ಹಿನ್ನೆಲೆ ಪ್ರಸಕ್ತ ವರ್ಷ ಕಾಲೇಜುಗಳು ಆರಂಭವಾಗುತ್ತವೆಯೋ ಇಲ್ಲ ಆನ್ ಲೈನ್ಕ್ಲಾಸ್ನಲ್ಲೇ ಈ ವರ್ಷ ಮುಗಿಸಬೇಕಾ ಎನ್ನುವ ವಿದ್ಯಾರ್ಥಿಗಳ ಗೊಂದಲಕ್ಕೆ ರಾಜ್ಯ ಸರ್ಕಾರ ತೆರೆ ಎಳೆದಿದೆ. ಮುಂದಿನ ತಿಂಗಳು ಪದವಿ ಕಾಲೇಜುಗಳಲ್ಲಿ ಪೂರ್ಣ ಪ್ರಮಾಣದ ತರಗತಿಗಳನ್ನು ಪ್ರಾರಂಭಿಸುವ ಕುರಿತು ಸರ್ಕಾರದ ನಿರ್ಧಾರಕ್ಕೆ ವಿದ್ಯಾರ್ಥಿಗಳು ಸ್ವಾಗತಿಸಿ ಸಂತಸ ವ್ಯಕ್ತಪಡಿಸಿದ್ದಾರೆ.
ರಾಜ್ಯ ಸರ್ಕಾರ ನ.17ರಿಂದ ಪದವಿ ಡಿಪ್ಲೊಮಾ, ಇಂಜಿನಿಯರಿಂಗ್ ಸೇರಿದಂತೆ ಉನ್ನತ ಶಿಕ್ಷಣ ತರಗತಿಗಳನ್ನು ನಡೆಸಲು ಅನುಮತಿ ನೀಡಿದೆ. ಈಗಾಗಲೇ ಯುಜಿಸಿ ಮಾರ್ಗಸೂಚಿ ಪ್ರಕಾರ ಪದವಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲಾಗಿದ್ದು, ಕಳೆದ ಎರಡು ತಿಂಗಳಿನಿಂದ ಆನ್ಲೈನ್ ತರಗತಿಗಳು ನಡೆಯುತ್ತಿದ್ದರೂ, ಪರಿಣಾಮಕಾರಿಯಾಗಿ ಪಠ್ಯ ಬೋಧನೆಯಾಗುತ್ತಿಲ್ಲ ಎಂದು ವಿದ್ಯಾರ್ಥಿಗಳು ಅಸಮಾಧಾನ ಹೊರ ಹಾಕಿದ್ದರು.
ಕೊನೆಗೂ ರಾಜ್ಯ ಸರ್ಕಾರ ಉನ್ನತ ಶಿಕ್ಷಣದ ತರಗತಿಗಳನ್ನು ಪೂರ್ಣ ಪ್ರಮಾಣದಲ್ಲಿ ಆರಂಭಿಸಲು ನಿರ್ಧರಿಸಿರುವುದನ್ನು ಸ್ಥಳೀಯ ವಿದ್ಯಾರ್ಥಿಗಳು ಸ್ವಾಗತಿಸಿ, ಸಂತೋಷ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾತನಾಡಿದ ವಿದ್ಯಾರ್ಥಿನಿ ಗಗನ, ದೇಶದಲ್ಲಿ ಕೊರೊನಾ ಬಂದ ನಂತರ ಶೈಕ್ಷಣಿಕ ಸಂಸ್ಥೆಗಳು ಬಂದ್ ಆಗಿದ್ದು, ಕಳೆದ ಎರಡು ತಿಂಗಳ ಹಿಂದೆ ಆನ್ಲೈನ್ ಕ್ಲಾಸ್ ನಡೆಸುತ್ತಿದ್ದರೂ ಸಹ ಪರಿಣಾಮಕಾರಿಯಾಗಿ ಪಠ್ಯ ಆಲಿಸಲು ಸಾಧ್ಯವಾಗುತ್ತಿಲ್ಲ, ಪೂರ್ಣ ಪ್ರಮಾಣದ ತರಗತಿ ಪ್ರಾರಂಭಿಸುವ ರಾಜ್ಯ ಸರ್ಕಾರದ ನಿರ್ಣಯ ಸ್ವಾಗತಿಸುತ್ತೇನೆ ಎಂದಿದ್ದಾರೆ.
ವಿದ್ಯಾರ್ಥಿ ಶಾಹಿದ್ ಮಾತನಾಡಿ, ಆನ್ಲೈನ್ ತರಗತಿ ವೇಳೆ ಅನೇಕ ಸಮಸ್ಯೆ ಎದುರಾಗುತ್ತವೆ. ಅಷ್ಟು ಪರಿಣಾಮಕಾರಿಯಾಗಿ ಪಾಠ ಕೇಳಲು ಆಗುತ್ತಿರಲಿಲ್ಲ, ಮುಂದಿನ ತಿಂಗಳಿನಲ್ಲಿ ಪೂರ್ಣ ಪ್ರಮಾಣದ ತರಗತಿಗಳನ್ನು ಪ್ರಾರಂಭಿಸುವ ನಿರ್ಧಾರಕ್ಕೆ ಸ್ವಾಗತವಿದ್ದು, ಕೊರೊನಾ ಮುಜಾಗ್ರತಾ ಕ್ರಮಗಳನ್ನು ಅಳವಡಿಸಿಕೊಂಡು ತರಗತಿಗಳಿಗೆ ಹಾಜರಾಗುತ್ತೇವೆ ಎಂದರು.
ಈ ಕುರಿತು ಮತ್ತೋರ್ವ ವಿದ್ಯಾರ್ಥಿನಿ ಸಿಂಧುಜಾ ಮಾತನಾಡಿ, ಕೊರೊನಾ ಹಿನ್ನೆಲೆ ಇಡೀ ಶೈಕ್ಷಣಿಕ ವರ್ಷ ಹಾಳಾಗಿದ್ದು, ಆನ್ಲೈನ್ ತರಗತಿಗಳಿಗೆ ಕೊನೆ ಹಾಡಿ ಪೂರ್ಣ ಪ್ರಮಾಣದ ತರಗತಿಗಳ ಆರಂಭಕ್ಕೆ ಮುಂದಾಗಿರುವುದು ಸ್ವಾಗತಿಸುತ್ತೇನೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.