ರಾಯಚೂರು: ಏ. 27ರಂದು ಎಂಜಿನಿಯರಿಂಗ್ ವಿದ್ಯಾರ್ಥಿನಿ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿಯಿಂದ ತನಿಖೆ ಚುರುಕುಗೊಂಡಿದೆ. ಪೊಲೀಸ್ ಇಲಾಖೆಯಿಂದ ಅಗತ್ಯ ಸಹಕಾರ ನೀಡಲಾಗುತ್ತಿದ್ದು, ಕರ್ತವ್ಯಲೋಪದ ಆಧಾರದ ಮೇಲೆ ಈಗಾಗಲೇ ಇಬ್ಬರು ಪೊಲೀಸರನ್ನು ಅಮಾನತು ಮಾಡಲಾಗಿದೆ. ನಮ್ಮಿಂದ ಸಂಪೂರ್ಣ ಬೆಂಬಲ ನೀಡಲಾಗುವುದು ಎಂದು ಕ್ರೈಂ ಎಡಿಜಿಪಿ ಡಾ. ಎಂ.ಎ.ಸಲೀಂ ಹೇಳಿದರು.
ಎಸ್ಪಿ ಕಚೇರಿಯ ಸಭಾಂಗಣದಲ್ಲಿ ಇಂದು ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪ್ರಕರಣ ಸಂಬಂಧ ತನಿಖೆಯ ಆರಂಭದಲ್ಲಿ ವೈಫಲ್ಯದ ಆಧಾರದಲ್ಲಿ ಇಬ್ಬರನ್ನು ಅಮಾನತು ಮಾಡಲಾಗಿದೆ. ಸಮಗ್ರ ತನಿಖೆಯನ್ನು ಸಿಐಡಿಗೆ ವಹಿಸಲಾಗಿದೆ. ರಾಯಚೂರಿನಲ್ಲಿ ಸಿಐಡಿ ಟೀಂ ಬೀಡು ಬಿಟ್ಟಿದ್ದು ತನಿಖೆ ಚುರಿಕುಗೊಳಿಸಿದ್ದಾರೆ ಎಂದರು.
ಅಲ್ಲದೇ ಇಂಥ ಪ್ರಕರಣ ಮುಂದೆ ಜರುಗದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲು ವಿದ್ಯಾರ್ಥಿಗಳ ಸಂಘಟನೆ ಮುಖಂಡರ ಜೊತೆ ಚರ್ಚೆ ನಡೆಸಿದ್ದೇವೆ. ವಿದ್ಯಾರ್ಥಿಗಳ ಸುರಕ್ಷತೆಗಾಗಿ ಶಾಲಾ-ಕಾಲೇಜುಗಳಲ್ಲಿ ಜಾಗೃತಿ ಮೂಡಿಸಲಾಗುವುದು ಎಂದರು. ಈ ಸಂದರ್ಭ ಬಳ್ಳಾರಿ ವಲಯ ಐಜಿಪಿ ನಂಜುಂಡ ಸ್ವಾಮಿ, ಎಸ್ಪಿ ಕಿಶೋರ್ ಬಾಬು ಹಾಜರಿದ್ದರು.