ರಾಯಚೂರು : ತುಂಗಾತೀರದಲ್ಲಿ ನೆಲೆಸಿರುವ ಶ್ರೀರಾಘವೇಂದ್ರ ಸ್ವಾಮಿಗಳ ದರ್ಶನಕ್ಕೆ ದೇಶದ ನಾನಾ ಮೂಲೆಗಳಿಂದ ಭಕ್ತರು ಆಗಮಿಸುತ್ತಾರೆ. ಬಂದಂತಹ ಭಕ್ತರು ತುಂಗಭದ್ರಾ ನದಿಯಲ್ಲಿ ಪುಣ್ಯ ಸ್ನಾನ ಮಾಡಿ ರಾಯರ ಮೂಲ ಬೃಂದಾವನದ ದರ್ಶನ ಮಾಡುತ್ತಾರೆ. ಆದರೆ, ಈ ಬಾರಿ ಆರಾಧನಾ ಮಹೋತ್ಸವಕ್ಕೆ ಬರುವವರಿಗೆ ನದಿಯಲ್ಲಿ ನೀರಿಲ್ಲದೇ ಇರುವುದು ಭಾರಿ ನಿರಾಶೆ ಮೂಡಿಸಿದೆ.
ಹೌದು, ರಾಯಚೂರು ಸಮೀಪವಿರುವ ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ 352 ನೇ ಆರಾಧನಾ ಮಹೋತ್ಸವ ಹತ್ತಿರವಾಗುತ್ತಿದೆ. ಇದಕ್ಕಾಗಿ ಶ್ರೀಮಠದಲ್ಲಿ ಸಕಲ ಸಿದ್ಧತಾ ಕಾರ್ಯಗಳು ಭರದಿಂದ ಸಾಗುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಈ ಬಾರಿ ಭಕ್ತರು ಆಗಮಿಸುವ ನಿರೀಕ್ಷೆಯಿದೆ. ಆದರೆ, ಸಕಾಲಕ್ಕೆ ಮಳೆ ಸುರಿಯದ ಪರಿಣಾಮ ತುಂಗಭದ್ರಾ ನದಿಯಲ್ಲಿ ನೀರಿಲ್ಲದಿರುವುದರಿಂದ ಪುಣ್ಯ ಸ್ನಾನಕ್ಕೆ ಅಡ್ಡಿಯಾಗುವ ಸಾಧ್ಯತೆಯಿದೆ. ಹೀಗಾಗಿ, ನದಿ ತೀರದಲ್ಲಿ ಪರ್ಯಾಯ ಸ್ನಾನದ ವ್ಯವಸ್ಥೆ ಮಾಡಬೇಕು ಎಂದು ಭಕ್ತರು ಮನವಿ ಮಾಡಿದ್ದಾರೆ.
ಇದನ್ನೂ ಓದಿ : ಮಂತ್ರಾಲಯದಲ್ಲಿ ರಾಯರ ಮಧ್ಯಾರಾಧನೆ.. ಚಿನ್ನದ ರಥೋತ್ಸವದಲ್ಲಿ ಭಾಗಿಯಾದ ಭಕ್ತರು
ಆಗಸ್ಟ್ 29 ರಿಂದ ಸೆ. 4ರ ವರೆಗೆ ಏಳು ದಿನಗಳ ಕಾಲ ನಡೆಯುವ 352 ನೇ ಆರಾಧನಾ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಲಾಗಿದ್ದು, ರಾಜ್ಯ ಸೇರಿದಂತೆ ದೇಶದ ಮೂಲೆ ಮೂಲೆಗಳಿಂದ ಭಕ್ತರು ಆಗಮಿಸಿ ವೈಭವದಿಂದ ನಡೆಯುವ ಮಹೋತ್ಸವನ್ನು ಕಣ್ತುಂಬಿಕೊಳ್ಳುತ್ತಾರೆ. ಏಳು ದಿನಗಳ ಕಾಲ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಸಮಾರಂಭಗಳು ನಡೆಯಲಿವೆ. ಜೊತೆಗೆ, ಗ್ರಂಥಗಳ ಲೋಕಾರ್ಪಣೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹನೀಯರಿಗೆ ಶ್ರೀರಾಘವೇಂದ್ರ ಅನುಗ್ರಹ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಆ.29 ರಂದು ಧ್ವಜಾರೋಹಣ, ಗೋ, ಧಾನ್ಯ, ಲಕ್ಷ್ಮಿಪೂಜೆ ಮೂಲಕ ಮಹೋತ್ಸವಕ್ಕೆ ವಿಜೃಂಭಣೆಯ ಚಾಲನೆ ನೀಡಲಾಗುತ್ತದೆ.
ಇದನ್ನೂ ಓದಿ : Mantralaya : ಆಗಸ್ಟ್ 29ರಿಂದ ಶ್ರೀಗುರು ರಾಯರ 352 ನೇ ಆರಾಧನಾ ಮಹೋತ್ಸವ
"ಭಕ್ತರಿಗೆ ಸ್ನಾನಕ್ಕಾಗಿ ನದಿ ತಟದಲ್ಲಿ ಷವರ್, ಬಟ್ಟೆ ಬದಲಾಯಿಸಲು ವ್ಯವಸ್ಥೆ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಶ್ರೀಮಠದಿಂದ ಕೈಗೊಳ್ಳಲಾಗುವುದು. ಜೊತೆಗೆ, ನೀರು ಬಿಡುವಂತೆ ಟಿಬಿ ಡ್ಯಾಂ ಅಧಿಕಾರಿಗಳನ್ನು ಸಂಪರ್ಕ ಮಾಡಲಾಗಿದೆ" ಎಂದು ಪೀಠಾಧಿಪತಿ ಶ್ರೀಸುಬುಧೇಂದ್ರ ತೀರ್ಥರು ಹೇಳಿದ್ದಾರೆ.
ಇದನ್ನೂ ಓದಿ : ಮಂತ್ರಾಲಯದಲ್ಲಿ ರಾಘವೇಂದ್ರ ಸ್ವಾಮಿಯ ಉತ್ತರ ಆರಾಧನಾ ಮಹೋತ್ಸವ
ಒಟ್ಟಿನಲ್ಲಿ, ಕೆಲವೇ ದಿನಗಳು ಬಾಕಿ ಇರುವ ರಾಯರ ಆರಾಧನಾ ಮಹೋತ್ಸವಕ್ಕೆ ತುಂಗಭದ್ರಾ ನದಿಗೆ ನೀರು ಹರಿದು ಬಂದರೆ ಪುಣ್ಯ ಸ್ನಾನಕ್ಕೆ ಅವಕಾಶ ದೊರೆಯಲಿದೆ. ಇಲ್ಲದಿದ್ದರೆ, ಪರ್ಯಾಯ ಸ್ನಾನದ ವ್ಯವಸ್ಥೆಗೆ ಶ್ರೀಮಠ ಮುಂದಾಗಿದೆ. ಗಂಗಾ ಸ್ನಾನ ತುಂಗಾ ಪಾನ ಎಂಬ ನಾಡುನುಡಿ ಇದ್ದು, ನೀರಿಲ್ಲದೆ ಇರುವುದು ಭಕ್ತರಿಗೆ ನಿರಾಶೆ ಮೂಡಿದೆ. ಮಹೋತ್ಸವದೊಳಗೆ ನದಿಗೆ ನೀರು ಹರಿದು ಬರಲಿ ಎನ್ನುವುದು ಎಲ್ಲ ಭಕ್ತರ ಪ್ರಾರ್ಥನೆ.
ಇದನ್ನೂ ಓದಿ : ಮಂತ್ರಾಲಯದಲ್ಲಿ ರಾಯರ ಮಧ್ಯಾರಾಧನೆ .. ಚಿನ್ನದ ರಥೋತ್ಸವದಲ್ಲಿ ಭಾಗಿಯಾದ ಭಕ್ತರು