ರಾಯಚೂರು: ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಕರಡಕಲ್ ಗ್ರಾಮದಲ್ಲಿ ಈ ಅಪರೂಪದ ಬೆಕ್ಕು ಪತ್ತೆಯಾಗಿದೆ. ರಾತ್ರಿ ವೇಳೆ ಗ್ರಾಮದಲ್ಲಿ ಶ್ವಾನಗಳು ಪುನುಗು ಬೆಕ್ಕನ್ನು ಕಂಡು ಜೋರಾಗಿ ಕೂಗುತ್ತಿದ್ದವು.
ಇದನ್ನು ಕಂಡ ಸ್ಥಳೀಯರೊಬ್ಬರು ಶ್ವಾನಗಳನ್ನು ಓಡಿಸಿ ಬೆಕ್ಕು ರಕ್ಷಣೆ ಮಾಡಿದ್ದಾರೆ. ಬಳಿಕ ಬೆಳಿಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಸ್ಥಳಕ್ಕಾಗಮಿಸಿದ ಅರಣ್ಯಾಧಿಕಾರಿಗಳು ಬೆಕ್ಕನ್ನು ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ. ಪುನುಗು ಬೆಕ್ಕು ಜನನಿಬಿಡ ಪ್ರದೇಶದಲ್ಲಿ ಕಂಡು ಬರುವುದಿಲ್ಲ. ಬದಲಾಗಿ ಕಾಡಿನಲ್ಲಿ ವಾಸವಾಗಿರುತ್ತದೆ. ಮಳೆಯಿಂದ ಇಲ್ಲವೇ ಆಹಾರ ಅರಸಿ ನಾಡಿಗೆ ಬಂದಿರಬಹುದು ಎಂದು ಹೇಳಲಾಗುತ್ತಿದೆ.
ಕಾಫಿ ತಯಾರಿಕೆಯಲ್ಲಿ ಪುನುಗು ಬೆಕ್ಕಿನ ಮಲ!
ಭಾರತ, ಏಷ್ಯಾದ ರಾಷ್ಟ್ರಗಳಲ್ಲೇ ಕಾಫಿಯನ್ನು ರಫ್ತು ಮಾಡುವ ವಿಚಾರದಲ್ಲಿ ಮೂರನೇ ಸ್ಥಾನ ಪಡೆದಿದೆ. ಕೊಡಗಿನಲ್ಲಿ ತಯಾರಾಗುವ ದುಬಾರಿ ಕಾಫಿಯಲ್ಲಿ ಈ ಪುನುಗು ಬೆಕ್ಕಿನ ಮಲ ಬಳಸಲಾಗುತ್ತದೆ. ಪುನುಗು ಬೆಕ್ಕು ಕಾಫಿ ಬೀಜದ ಹಣ್ಣಿನ ತಿರುಳನ್ನು ಮಾತ್ರ ತಿನ್ನುತ್ತದೆ. ನಂತರ ಬೆಕ್ಕಿನ ಮಲದಲ್ಲಿರುವ ಕಾಫಿ ಕಣಗಳನ್ನು ಸಂಸ್ಕರಿಸಿ ಕಾಫಿ ಪುಡಿ ತಯಾರಿಸಲಾಗುತ್ತದೆ. ಈ ಹಂತದಲ್ಲಿ ಪುನುಗು ಬೆಕ್ಕಿನ ಮಲ ಸಂಗ್ರಹಣೆ, ಸಂಸ್ಕರಣೆಯೇ ಅತ್ಯಂತ ದುಬಾರಿಯಾದ ಪ್ರಕ್ರಿಯೆ. ಹಾಗಾಗಿಯೇ ಈ ಕಾಫಿ ದುಬಾರಿಯಾದ ಕಾಫಿಯಾಗಿದೆ.