ರಾಯಚೂರು: ಜಿಲ್ಲೆಯಲ್ಲಿ ನಿನ್ನೆ ತಡರಾತ್ರಿವರೆಗೆ ಗ್ರಾಮ ಪಂಚಾಯಿತಿ ಚುನಾವಣೆ ಫಲಿತಾಂಶದ ಮತ ಎಣಿಕೆ ಕಾರ್ಯ ನಡೆಯಿತು. ಈ ವೇಳೆ ಕೆಲವರಿಗೆ ವಿಜಯಲಕ್ಷ್ಮಿ ಒಲಿದರೆ, ಮತ್ತೆ ಕೆಲವರು ಸೋತು ನಿರಾಶೆಯಿಂದ ಮನೆ ಕಡೆ ಹೆಜ್ಜೆ ಹಾಕಿದರು.
ಜಿಲ್ಲೆಯ ಒಟ್ಟು 172 ಗ್ರಾಮ ಪಂಚಾಯಿತಿಗಳ 3,377 ಸ್ಥಾನಗಳ ಪೈಕಿ, 417 ಜನರು ಅವಿರೋಧವಾಗಿ ಆಯ್ಕೆಯಾಗಿದ್ದರು. ಉಳಿದ 77 ಸ್ಥಾನಗಳು ನಾಮಪತ್ರ ಸಲ್ಲಿಕೆಯಾಗದೆ ಖಾಲಿ ಉಳಿದಿದ್ದವು. ಇನ್ನುಳಿದ 2,881 ಸ್ಥಾನಗಳಿಗೆ ಜಿಲ್ಲೆಯ ಎರಡು ಹಂತದಲ್ಲಿ ಚುನಾವಣೆ ನಡೆದಿತ್ತು.
ಜಿಲ್ಲೆಯ ಮಾನವಿ, ಸಿಂಧನೂರು, ಮಸ್ಕಿ, ಲಿಂಗಸೂಗೂರು, ಸಿರವಾರ, ದೇವದುರ್ಗ ಹಾಗೂ ರಾಯಚೂರು ತಾಲೂಕಿನ ಆಯಾ ತಾಲೂಕು ಕೇಂದ್ರದಲ್ಲಿ ಮತ ಎಣಿಕೆ ಕಾರ್ಯವನ್ನು ತಡರಾತ್ರಿವರೆಗೆ ನಡೆಸಿ ಚುನಾವಣೆ ಫಲಿತಾಂಶ ಪ್ರಕಟಿಸಲಾಯಿತು.
ಗೆದ್ದ ಅಭ್ಯರ್ಥಿಗಳು ಹಾಗೂ ಬೆಂಬಲಿಗರು, ಹಿತೈಷಿಗಳು ಗೆಲುವಿನ ನಂತರ ಪರಸ್ಪರ ಬಣ್ಣ ಎರಚಿಕೊಳ್ಳುವ ಮೂಲಕ ಜಯದ ಸಂಭ್ರಮ ಆಚರಿಸಿದರು. ಪರಾಜಿತ ಅಭ್ಯರ್ಥಿಗಳು ಮತದಾರ ತೀರ್ಪಿಗೆ ತಲೆ ಬಾಗಿ ನಿರಾಸೆಯಿಂದ ಮನೆ ಕಡೆ ನಡೆದರು.
ಒಟ್ಟು ಗ್ರಾ.ಪಂಗಳು -172
ಒಟ್ಟು ಸದಸ್ಯ ಸ್ಥಾನಗಳು- 3,377
ಚುನಾವಣೆಯಲ್ಲಿ ಗೆದ್ದಿರುವ ಅಭ್ಯರ್ಥಿಗಳ ವಿವರ(ಅಂದಾಜು)
ಬಿಜೆಪಿ-1,251
ಕಾಂಗ್ರೆಸ್-1,585
ಜೆಡಿಎಸ್-184
ಇತರೆ-357