ರಾಯಚೂರು: ಉರಗ ರಕ್ಷಕರೊಬ್ಬರು ಗಾಯಗೊಂಡಿರುವ ಹಾವನ್ನು ರಕ್ಷಣೆ ಮಾಡಿ ಚಿಕಿತ್ಸೆಗಾಗಿ ಆಸ್ಪತ್ರಗೆ ಕರೆದೊಯ್ದಿರುವ ಘಟನೆ ಮಾನ್ವಿ ತಾಲೂಕಿನಲ್ಲಿ ನಡೆದಿದೆ. ತಾಲೂಕಿನ ಕರಡಿಗುಡ್ಡ ರಸ್ತೆಯಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡದಲ್ಲಿ ನಾಗರಹಾವು ಸಿಲುಕಿ ಗಾಯಗೊಂಡಿತ್ತು. ಈ ಕುರಿತು ಮಾಹಿತಿ ಪಡೆದ ಉರಗ ರಕ್ಷಕ ರಮೇಶ ಸ್ಥಳಕ್ಕೆ ಬಂದು, ಹಾವನ್ನು ರಕ್ಷಿಸಿ ಪಟ್ಟಣದ ಪಶು ಚಿಕಿತ್ಸಾಲಯಕ್ಕೆ ತೆಗೆದುಕೊಂಡು ಹೋಗಿದ್ದಾರೆ.
ಇನ್ನು ವೈದ್ಯರಾದ ಡಾ.ರಾಜು ಕಂಬಳೆ, ಹಾವಿಗೆ ಅರವಳಿಕೆ ಮದ್ದು ನೀಡಿ, ಶಸ್ತ್ರ ಚಿಕಿತ್ಸೆ ಮಾಡಿದ್ದಾರೆ. ಈ ಕುರಿತು ಮಾತನಾಡಿದ ಡಾ.ರಾಜು ವಿಷಪೂರಿತ ಹಾವಿಗೆ ಚಿಕಿತ್ಸೆ ನೀಡಿರುವುದು ಜೀವನದಲ್ಲಿ ಇದೇ ಪ್ರಥಮ ಹಾಗೂ ಹೊಸ ಅನುಭವ ನೀಡಿದೆ. ಚಿಕಿತ್ಸೆ ವೇಳೆ ಹಾವು ಕಚ್ಚದಂತೆ ಜಾಗ್ರತೆ ವಹಿಸಿಲಾಗಿದೆ. ನಾಗರ ಹಾವು ತಲೆ ಭಾಗದ ಹತ್ತಿರ ಗಾಯವಾಗಿದ್ದು ಶಸ್ತ್ರ ಚಿಕಿತ್ಸೆ ಮೂಲಕ ಹೊಲಿಗೆ ಹಾಕಿ ಪ್ರಥಮ ಚಿಕಿತ್ಸೆ ನೀಡಲಾಗಿದೆ ಎಂದು ಹೇಳಿದರು.
ಸದ್ಯ ರಮೇಶ್ ಅವರು ತಮ್ಮ ಮನೆಯಲ್ಲಿ ಹಾವು ಆರೈಕೆ ಮಾಡುತ್ತಿದ್ದು, 10 ದಿನಗಳಾದ ನಂತರ ಅರಣ್ಯಾಧಿಕಾರಿಗಳ ಸಮ್ಮುಖದಲ್ಲಿ ಅರಣ್ಯಕ್ಕೆ ಬಿಡಲಾಗುವುದು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಆ ಮಹಾ ನಾಯಕನ ಮುಂದಿನ ರಾಜಕಾರಣಕ್ಕೆ ಇದು ಮುಳ್ಳಾಗುವಂತೆ ಮಾಡ್ತೇನೆ: ನವ್ಯಾಶ್ರೀ ಆರೋಪ