ಸಿರವಾರ(ರಾಯಚೂರು) : ಉಸಿರಾಟದ ತೊಂದರೆಯಿಂದ ಮೃತಪಟ್ಟ ವ್ಯಕ್ತಿಗೆ ಕೊರೊನಾ ಶಂಕೆ ಹಿನ್ನೆಲೆಯಲ್ಲಿ ಜಿಲ್ಲೆಯ ಸಿರವಾರ ಪಟ್ಟಣವನ್ನು ಸೀಲ್ ಡೌನ್ ಮಾಡಲಾಗಿದೆ. ಪಟ್ಟಣದಲ್ಲಿ ಎಲ್ಲಾ ಅಂಗಡಿ-ಮುಗಟ್ಟುಗಳನ್ನ ಬಂದ್ ಮಾಡಲಾಗಿದೆ.
ರವಿವಾರದಂದು ಯಾದಗಿರಿ ಮೂಲದ 45 ವರ್ಷದ ವ್ಯಕ್ತಿಯೊಬ್ಬರು, ಪಟ್ಟಣದ ವಾರ್ಡ್ 1ರ ಈಶ್ವರ ದೇವಾಲಯದಲ್ಲಿ ನಡೆದ ವಿವಾಹದಲ್ಲಿ ಭಾಗವಹಿಸಲು ಆಗಮಿಸಿದ್ದರು. ಈ ವ್ಯಕ್ತಿಗೆ ಉಸಿರಾಟ ತೊಂದರೆ ಕಾಣಿಸಿಕೊಂಡಿತ್ತು. ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯದಲ್ಲಿ ವ್ಯಕ್ತಿ ಮೃತಪಟ್ಟಿದ್ದ.
ಮೃತಪಟ್ಟ ವ್ಯಕ್ತಿಯ ಗಂಟಲು ದ್ರವವನ್ನ ಸಂಗ್ರಹಿಸಿ ಟ್ರೂನ್ಯೂಟ್ನಲ್ಲಿ ಪರೀಕ್ಷೆ ನಡೆಸಿದಾಗ ಪಾಸಿಟಿವ್ ಕಾಣಿಸಿದೆ. ಇದೀಗ ಮತ್ತೊಮ್ಮೆ ಪರೀಕ್ಷೆಗೆ ಆರ್ಟಿಪಿಸಿಆರ್ ಪ್ರಯೋಗಾಲಯಕ್ಕೆ ಪರೀಕ್ಷೆಗೆ ರವಾನಿಸಲಾಗಿದ್ದು, ವರದಿಗಾಗಿ ಜಿಲ್ಲಾಡಳಿತ ಕಾಯುತ್ತಿದೆ.
ಇದರ ಮಧ್ಯೆ ಮೃತ ವ್ಯಕ್ತಿಯೊಂದಿಗೆ ಸಂಪರ್ಕವಿದೆ ನಾಲ್ಕು ಜನರನ್ನ ಕ್ವಾರಂಟೈನ್ ಮಾಡಲಾಗಿದೆ. ವಿವಾಹದಲ್ಲಿ ಭಾಗವಹಿಸಿರುವುದರಿಂದ ವ್ಯಕ್ತಿಯ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರ ಮಾಹಿತಿಯನ್ನು ಸಂಗ್ರಹಿಸಲು ಮತ್ತು ಮುನ್ನಚ್ಚೆರಿಕೆ ಕ್ರಮವಾಗಿ ಇಂದು ಮತ್ತು ನಾಳೆ ಎರಡು ದಿನಗಳ ಕಾಲ ಪಟ್ಟಣದಲ್ಲಿ ಯಾವುದೇ ವ್ಯಾಪಾರ-ವಹಿವಾಟು ನಡೆಯದಂತೆ ಬಂದ್ ಗೊಳಿಸಿ ಸೀಲ್ ಡೌನ್ ಮಾಡಲಾಗಿದೆ.
ಅಲ್ಲದೇ ವ್ಯಕ್ತಿ ಓಡಾಡಿದ ಸ್ಥಳವನ್ನ ಕಂಟೇನ್ಮೆಂಟ್ ಝೋನ್ ಮಾಡಲಾಗಿದೆ. ಈ ಪ್ರಕರಣದಿಂದ ಪಟ್ಟಣದಲ್ಲಿ ಜನರಲ್ಲಿ ಆತಂಕ ಮೂಡಿಸಿದೆ.