ರಾಯಚೂರು : ಸಿಂಧನೂರು ಗ್ರಾಮೀಣ ಠಾಣೆ ಪಿಎಸ್‌ಐ ಫೇಸ್‌ಬುಕ್ ಖಾತೆಯನ್ನು ಸೈಬರ್ ಖದೀಮರು ಹ್ಯಾಕ್ ಮಾಡಿ, ಪಿಎಸ್‌ಐ ಫೇಸ್‌ಬುಕ್ ಖಾತೆಯಿಂದ ಸ್ನೇಹಿತರಿಗೆ ಹಣದ ಸಹಾಯ ಮಾಡುವಂತೆ ಸಂದೇಶ ಕಳುಹಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.
ಪಿಎಸ್‌ಐ ರಾಘವೇಂದ್ರ ಅವರ ಫೇಸ್‌ಬುಕ್ ಖಾತೆಯನ್ನು ಹ್ಯಾಕ್ ಮಾಡಲಾಗಿದೆ. ಆ ಮೂಲಕ ಸ್ನೇಹಿತರಿಗೆ ಹಣದ ಬೇಡಿಕೆ ಇಡಲಾಗಿದೆ. ಗೂಗಲ್ ಪೇ, ಇಲ್ಲವೇ ಫೋನ್ ಪೇ ಮೂಲಕ ಹಣ ಸಂದಾಯ ಮಾಡುವಂತೆ ಮೊಬೈಲ್ ನಂಬರ್ ಹಾಕಿ ಸಂದೇಶ ರವಾನಿಸಲಾಗಿದೆ.
ಇದನ್ನು ನೋಡಿದ ಪಿಎಸ್‌ಐ ಸ್ನೇಹಿತರು, ಹಿತೈಷಿಗಳು, ಸಂಬಂಧಿಕರು ಅನುಮಾನಗೊಂಡು ಪಿಎಸ್‌ಐಗೆ ಕರೆ ಮಾಡಿದ್ದಾರೆ. ಆಗ ಫೇಸ್‌ಬುಕ್ ಖಾತೆಯನ್ನು ಹ್ಯಾಕ್ ಮಾಡಿರುವ ವಿಷಯ ಬೆಳಕಿಗೆ ಬಂದಿದೆ.
ಇದನ್ನೂ ಓದಿ: ಪಿಎಸ್‌ಐ ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆ ತೆರೆದು ಹಣಕ್ಕೆ ಬೇಡಿಕೆ ಇಟ್ಟ ಖದೀಮರು
ಆಗ ಪುನಃ ಪಿಎಸ್‌ಐ ತಮ್ಮ ಖಾತೆಯನ್ನು ಪರಿಶೀಲಿಸಿ, ನನ್ನ ಖಾತೆಯನ್ನು ಹ್ಯಾಕ್ ಮಾಡಲಾಗಿದೆ. ನಾನು ಯಾರ ಬಳಿಯೂ ಹಣಕ್ಕಾಗಿ ಬೇಡಿಕೆ ಇಟ್ಟಿಲ್ಲ. ದಯವಿಟ್ಟು ಹಣ ಸಂದಾಯ ಮಾಡಬೇಡಿ ಎಂದು ಸಂದೇಶ ಹಾಕಿದ್ದಾರೆ. ಬಳಿಕ ಈ ವಿಷಯ ಕುರಿತಂತೆ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ.