ರಾಯಚೂರು: ಪರಿಸರಕ್ಕೆ ಹಾನಿ ಮಾಡುವ ಪ್ಲಾಸ್ಟರ್ ಆಫ್ ಪ್ಯಾರಿಸ್(ಪಿಒಪಿ) ನಿಂದ ಗಣೇಶ ಮೂರ್ತಿಗಳನ್ನು ತಯಾರಿಸುವುದಕ್ಕೆ ನಿಷೇಧವಿದ್ದರೂ ಸಹ ರಾಯಚೂರು ಜಿಲ್ಲೆಯಲ್ಲಿ ಪಿಒಪಿ ಗಣೇಶ ಮೂರ್ತಿಗಳು ಮಾರಾಟ ಮಾಡಲಾಗುತ್ತಿದ್ದು, ಕ್ರಮ ಜರುಗಿಸಬೇಕಾದ ಸ್ಥಳೀಯ ಆಡಳಿತ ಕೈಕಟ್ಟಿ ಕುಳಿತಿದೆ.
ಪರಿಸರಕ್ಕೆಹಾನಿ ಉಂಟುಮಾಡುವ ಪ್ಲಾಸ್ಟಿಕ್, ಪ್ಲಾಸ್ಟರ್ ಆಫ್ ಪ್ಯಾರಿಸ್ ಸೇರದಿಂತೆ ಅನೇಕ ವಸ್ತುಗಳ ಬಳಕೆಯನ್ನ ಸರಕಾರ ನಿಷೇಧಿಸಿದೆ. ಇದನ್ನು ಆಯಾ ಇಲಾಖೆ ಬಳಕೆ ಮಾಡದಂತೆ ನಿಗಾವಹಿಸಿ, ನಿಷೇಧವೇರಿದ ವಸ್ತುಗಳನ್ನು ಬಳಸಿದ್ದರೆ ಕ್ರಮ ಕೈಗೊಳ್ಳಬೇಕು. ಆದ್ರೆ ರಾಯಚೂರು ನಗರದ ನಾನಾ ಕಡೆಗಳಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸಿನಿಂದ ತಯಾರು ಮಾಡಿರುವಂತಹ ಗಣೇಶ ಮೂರ್ತಿಗಳು ಮಾರಾಟ ಮಾಡುತ್ತಿರುವುದು ಕಂಡು ಬರುತ್ತಿದ್ದರೂ ಸಹ ಸ್ಥಳೀಯ ಆಡಳಿತ ಯಾವುದೇ ಕ್ರಮ ಕೈಗೊಂಡಿಲ್ಲ.
ಪ್ರತಿ ವರ್ಷ ಪರಿಸರ ಸ್ನೇಹಿ ಗಣಪತಿ ಮೂರ್ತಿಗಳನ್ನು ಪ್ರತಿಷ್ಠಾಪಿಸುವಂತೆ ನಾನಾ ಇಲಾಖೆಗಳು, ಸಂಘ-ಸಂಸ್ಥೆಗಳು ಜಾಗೃತಿ ಮೂಡಿಸುತ್ತವೆ. ಆದ್ರೆ ನಾನಾ ಬಡಾವಣೆಗಳಲ್ಲಿ ಮಣ್ಣಿನಿಂದ ತಯಾರಿಸಿದ ದೊಡ್ಡ ಗಾತ್ರ ಗಣೇಶ ಮೂರ್ತಿಗಳು ಸಿಗದ ಕಾರಣ ಪಿಒಪಿಗಳನ್ನ ಬಳಸಲಾಗುತ್ತದೆ ಎನ್ನಲಾಗುತ್ತದೆ. ವಾಸ್ತವದಲ್ಲಿ ಪಿಒಪಿಗಳ ಗಣಪಗಳು ಪರಿಸರಕ್ಕೆ ಮಾರಕವಾಗುತ್ತಿವೆ. ಪಿಒಪಿ ಗಣಪನ ಮೂರ್ತಿಗಳ ಸಂಪೂರ್ಣವಾಗಿ ನಿಷೇಧವಾಗಿಲ್ಲವಾದರೂ, ಜಿಲ್ಲೆಯ ಕೆಲ ಮಟ್ಟಿಗೆ ವರ್ಷದಿಂದ ವರ್ಷಕ್ಕೆ ಇಳಿಮುಖವಾಗಿದೆ ಎಂದು ತಿಳಿದುಬಂದಿದೆ.