ರಾಯಚೂರು : ಇಂದು RRR ಸಿನಿಮಾ ತೆರೆಕಂಡು ಎಲ್ಲೆಡೆ ಭರ್ಜರಿ ಪ್ರದರ್ಶನ ಕಾಣುತ್ತಿದೆ. ರಾಯಚೂರಿನಲ್ಲಿ ಆರ್ಆರ್ಆರ್ ಚಿತ್ರ ವೀಕ್ಷಿಸುವ ಸಲುವಾಗಿ ಚಿತ್ರಮಂದಿರದ ಎದುರು ಜನರ ನೂಕು ನುಗ್ಗಲು ಉಂಟಾಗಿತ್ತು. ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ. ಕೆಲವರಿಗೆ ಲಾಠಿ ರುಚಿ ತೋರಿಸಿದ್ದಾರೆ.
ನಗರದ ಪೂರ್ಣಿಮಾ ಚಿತ್ರಮಂದಿರದಲ್ಲಿ ಬೆಳಗ್ಗೆ ತ್ರಿಬಲ್ ಆರ್ ಚಿತ್ರ ಬಿಡುಗಡೆಯಾಗಿದೆ. ಇದನ್ನು ನೋಡಲು ಸಾವಿರಾರು ಜನರು ಥಿಯೇಟರ್ ಎದುರು ಧೌಡಾಯಿಸಿ, ಟಿಕೆಟ್ ಪಡೆಯಲು ಮುಗಿಬಿದ್ದಿದ್ದರು. ಟಿಕೆಟ್ ಪಡೆದ ಬಳಿಕ ಒಳಗಡೆಯ ಪ್ರವೇಶ ಬಾಗಿಲ ಬಳಿಯೂ ಸಹ ನೂಕುನುಗ್ಗಲು ಉಂಟಾಗಿತ್ತು.
ಬಾಗಿಲು ಮುರಿದಿದೆ. ಜನರ ನೂಕು ನುಗ್ಗಲು ಹೆಚ್ಚಾದ ಹಿನ್ನೆಲೆ ಪ್ರವೇಶ ದ್ವಾರದ ಬಳಿಯ ಸಿಬ್ಬಂದಿ ಸಹ ಜನರಿಗೆ ಲಾಠಿ ಏಟನ್ನು ನೀಡಿದ್ದಾರೆ. ಇನ್ನೂ ಥಿಯೇಟರ್ ಪ್ರವೇಶಿಸಲು ಜೀವವನ್ನು ಲೆಕ್ಕಿಸದೇ ಗೋಡೆ ಏರುತ್ತಿರುವ ದೃಶ್ಯ ಸಹ ಕಂಡು ಬಂದಿದೆ.
ಇದನ್ನೂ ಓದಿ: ದೊಡ್ಡಬಳ್ಳಾಪುರದಲ್ಲಿ ಮುಂಜಾನೆ 3 ಗಂಟೆಗೆ ಪ್ರದರ್ಶನಗೊಂಡ RRR, ಕುಣಿದು ಕುಪ್ಪಳಿಸಿದ ಫ್ಯಾನ್ಸ್
ಜನರನ್ನು ನಿಯಂತ್ರಿಸುವಲ್ಲಿ ಪೊಲೀಸರು ಹೈರಾಣಗಿದ್ದಾರೆ. ಪರಿಸ್ಥಿತಿಯನ್ನು ಹತೋಟಿಗೆ ತರಲು ಪೊಲೀಸರು ಲಾಠಿ ರುಚಿ ತೋರಿಸುವ ಮೂಲಕ ಸಾಲಿನಲ್ಲಿ ತೆರಳುವಂತೆ ಸೂಚಿಸಿದ್ದಾರೆ. ನೂಕು ನುಗ್ಗಲಿನಿಂದಾಗಿ ಥಿಯೇಟರ್ ಆವರಣದಲ್ಲಿ ಎಲ್ಲೆಂದರಲ್ಲಿ ಚಪ್ಪಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು.