ರಾಯಚೂರು: ಕೃಷ್ಣ, ತುಂಗಭದ್ರಾ ನದಿಗಳಿಂದ ಎದುರಾಗುವ ಪ್ರವಾಹ ಪರಿಸ್ಥಿತಿಯನ್ನ ವ್ಯವಸ್ಥಿತವಾಗಿ ನಿರ್ವಹಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ರಾಯಚೂರು ಜಿಲ್ಲಾ ಉಸ್ತುವರಿ ಸಚಿವ ಹಾಗೂ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಅಧಿಕಾರಿಗಳು ಸೂಚಿಸಿದ್ರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲೆಯ ತ್ರೈಮಾಸಿಕ ಕೆಡಿಪಿ ಸಭೆ ನಡೆಯಿತು. ಮಹಾರಾಷ್ಟ್ರದಲ್ಲಿ ಮಳೆ ಇಳಿಮುಖವಾಗಿದೆ. ಕೋಯ್ನಾ ಜಲಾಶಯದಿಂದ ರಾಜ್ಯಕ್ಕೆ ನೀರು ಹರಿಸುವ ಕುರಿತು ಅಲ್ಲಿನ ನೀರಾವರಿ ಇಲಾಖೆಯ ಸಚಿವರು, ರಾಜ್ಯದ ನೀರಾವರಿ ಇಲಾಖೆಯ ಸಚಿವರಿಗೆ ಮಾಹಿತಿ ನೀಡಲಿದ್ದಾರೆ. ಇಲ್ಲಿನ ಜಲಾಶಯಗಳಲ್ಲಿ ಸಂಗ್ರಹಗೊಂಡ ನೀರನ್ನು ಹರಿಸಿದ ನಂತರವಷ್ಟೇ ಅಲ್ಲಿನ ಜಲಾಯಶಗಳಿಂದ ನೀರು ಹರಿಸುವಂತೆ ಸೂಚಿಸಲಾಗಿದೆ. ಈ ಕುರಿತು ಪೂರ್ವ ಮಾಹಿತಿಗೆ ಮೇಲುಸ್ತುವಾರಿ ಸಮಿತಿ ರಚಿಸಲಾಗಿದೆ. ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕೆಂದು ಸೂಚಿಸಿದ್ರು.
ಪ್ರವಾಹ ಮುನ್ನೆಚ್ಚರಿಕಾ ಕಾರ್ಯಗಳನ್ನು ಅಧಿಕಾರಿಗಳು ಸಮರ್ಪಕವಾಗಿ ನಿರ್ವಹಿಸಬೇಕು. ಕೃಷ್ಣ ನದಿ ಪಾತ್ರದಲ್ಲಿ ಬರುವ ಗ್ರಾಮಗಳ ಜನರನ್ನು ಸ್ಥಳಾಂತರಿಸಿ, ಅವರಿಗೆ ತಾತ್ಕಾಲಿಕವಾಗಿ ಅಗತ್ಯ ಮೂಲಭೂತ ಸೌಕರ್ಯ ಒದಗಿಸಬೇಕು. ಫಸಲ್ ಭೀಮಾ ಯೋಜನೆಯಡಿ ವಿಮಾ ಕಂತು ಪಾವತಿಸಿರುವ ರೈತರಿಗೆ ಪರಿಹಾರ ಬಾಕಿಯಿರುವ ಬಗ್ಗೆ ಕೇಂದ್ರ ಹೈಪವರ್ ಸಮಿತಿ ಮುಂದೆಯಿದೆ. ಈ ಬಗ್ಗೆ ಗಮನ ಹರಿಸಿ ರೈತರಿಗೆ ವಿಮಾ ಹಣ ಪಾವತಿಸಲು ಕ್ರಮ ಜರುಗಿಸುವ ಭರವಸೆ ನೀಡಿದ್ರು.
ವೈಟಿಪಿಎಸ್ ಮತ್ತು ಆರ್‍ಟಿಪಿಎಸ್‍ಗಳಲ್ಲಿ ಅರಣ್ಯೀಕರಣ ನಡೆಯುವಾಗಿಲ್ಲ. ಇದರಿಂದ ಜಿಲ್ಲೆಯ ವಾಯುಮಾಲಿನ್ಯ ಹೆಚ್ಚಳವಾಗುತ್ತಿದೆ ಎಂದು ಸಭೆಯಲ್ಲಿ ಶಾಸಕರು ಆಕ್ಷೇಪ ವ್ಯಕ್ತಪಡಿಸಿದ್ರು. ಈ ವೇಳೆ ಮಧ್ಯೆ ಪ್ರವೇಶಿಸಿದ ಸಚಿವರು, ಸಸಿಗಳನ್ನು ನೆಡದೆ ಇರುವ ಬಗ್ಗೆ ಹಾಗೂ ಈ ಹಿಂದೆ ಮಾಡಿಕೊಂಡಿರುವ ಒಪ್ಪಂದ ಉಲ್ಲಂಘನೆಯ ಕುರಿತು ಸಂಬಂಧಿಸಿದವರಿಗೆ ಕೂಡಲೇ ನೋಟಿಸ್ ಜಾರಿಗೊಳಿಸುವಂತೆ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಅಧಿಕಾರಿಗೆ ಆದೇಶಿಸಿದ್ರು.
2009ರಲ್ಲಿ ಪ್ರವಾಹ ವೇಳೆ ಮಾನವಿ ತಾಲೂಕಿನ ಜಾಲಾಪೂರ, ತುಂಗಭದ್ರಾ ಹಾಗೂ ಅಮರಪುರ ಗ್ರಾಮದಲ್ಲಿ ದಾನಿಗಳ ನೆರವಿನಿಂದ ಸಂತ್ರಸ್ತರಿಗೆ ಮನೆಗಳನ್ನು ನಿರ್ಮಿಸಲಾಗಿದೆ. ಕೂಡಲೇ ಗ್ರಾಮ ಸಭೆ ನಡೆಸಿ ಅರ್ಹ ಫಲಾನುಭವಿಗಳಿಗೆ ಮನೆಗಳ ಹಕ್ಕು ಪತ್ರಗಳನ್ನ ಮುಂದಿನ ಕೆಡಿಪಿ ಸಭೆಯೊಳಗೆ ನೀಡುವಂತೆ ರಾಯಚೂರು ಸಹಾಯಕ ಆಯುಕ್ತರಿಗೆ ತಿಳಿಸಿದ್ರು.
ಕೆಆರ್ಡಿಎಲ್ ನಿರ್ವಹಿಸುತ್ತಿರುವ ವಿವಿಧ ಕಾಮಗಾರಿಗಳನ್ನು ಕಾಲಮಿತಿಯೊಳಗೆ ಪೂರ್ಣಗೂಳಿಸಿ ಸಂಬಂಧಪಟ್ಟಿ ಇಲಾಖೆಗೆ ಹಸ್ತಾಂತರ ಮಾಡಬೇಕು. ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅನುದಾನದಲ್ಲಿ ಕೈಗೆತ್ತಿಕೊಂಡಿರುವ ನಾನಾ ಕಾಮಗಾರಿಗಳನ್ನು ಗುಣಮಟ್ಟದಿಂದ ನಿರ್ವಹಿಸಿ ಪೂರ್ಣಗೊಳಿಸಬೇಕು. ಮಂಡಳಿಯಿಂದ ಬಾಕಿಯಿರುವ ಅನುದಾನವನ್ನು ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಲಾಗುವುದು.
ನಗರದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯ ಬಾಕಿಯಿರುವ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕೆಂದು ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಎಂಜನೀಯರಿಗೆ ಸೂಚಿಸಿದ ಸಚಿವರು, ಹೆದ್ದಾರಿ ಕಾಮಗಾರಿ ನಿರ್ವಹಿಸಲು ಏನಾದರೂ ಸಮಸ್ಯೆಯಿದ್ದಲ್ಲಿ ಪೊಲೀಸ್ ಬಂದೋಬಸ್ತ್ ವ್ಯವಸ್ತೆ ಕಲ್ಪಿಸಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ತಿಳಿಸಿದ್ರು.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತರ ಹಾಗೂ ಹಿಂದುಳಿದ ವರ್ಗಗಳ ಸಮುದಾಯಕ್ಕೆ ಸ್ವಯಂ ಉದ್ಯೋಗದಡಿ ಸಾಲ ನೀಡುವ ಯೋಜನೆಯಲ್ಲಿ ಬ್ಯಾಂಕ್ ಅಧಿಕಾರಿಗಳು ಕಾಲಹರಣ ಮಾಡದೆ ಅರ್ಹ ಫಲಾನುಭವಿಗಳ ಎಲ್ಲ ದಾಖಲೆಗಳನ್ನು ಪರಿಶೀಲಿಸಿ ಸಾಲ ನೀಡಬೇಕು. ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ರಸಗೊಬ್ಬರ ಮತ್ತು ಯೂರಿಯಾಗೆ ಹೆಚ್ಚಿನ ಬೇಡಿಕೆ ಇದೆ. ಕೇಂದ್ರ ರಸಗೊಬ್ಬರ ಸಚಿವರೊಂದಿಗೆ ಚರ್ಚಿಸಿ, ಜಿಲ್ಲೆಗೆ ರಸಗೊಬ್ಬರ ಪೂರೈಕೆ ಮಾಡುವ ವ್ಯವಸ್ಥೆ ಮಾಡಲಾಗುವುದು. ಇದೇ ಸಂದರ್ಭದಲ್ಲಿ ಸಚಿವರು, ಜೆಸ್ಕಾಂ, ಕೃಷಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ ನಾನಾ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದರು.