ರಾಯಚೂರು: ಶಾಖೋತ್ಪನ್ನ ವಿದ್ಯುತ್ ಕೇಂದ್ರದ (ಆರ್‌ಟಿಪಿಎಸ್) 8ನೇ ಘಟಕದಲ್ಲಿನ ಗುತ್ತಿಗೆ ಕಾರ್ಮಿಕರನ್ನು ಕೆಲಸದಿಂದ ವಜಾ ಮಾಡಿರುವುದನ್ನ ಖಂಡಿಸಿ ಕಾರ್ಮಿಕರು ಪ್ರತಿಭಟಿಸಿದರು.
ತಾಲೂಕಿನ ಶಕ್ತಿನಗರದಲ್ಲಿನ ಆರ್‌ಟಿಪಿಎಸ್‌ನ ಮುಖ್ಯದ್ವಾರದ ಬಳಿ ಪ್ರತಿಭಟನೆ ನಡೆಸಿದ ಕಾರ್ಮಿಕರು, 8ನೇ ಘಟಕದಲ್ಲಿ ಕಳೆದ ಹತ್ತು ವರ್ಷಗಳಿಂದ ನಾನಾ ಹುದ್ದೆಗಳಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿದ್ದರು. ಪ್ರತಿ ವರ್ಷ ಗುತ್ತಿಗೆ ಕಾರ್ಮಿಕರ ಹುದ್ದೆಯನ್ನ ರಿನಿವಲ್ ಮಾಡಿಸಿಕೊಂಡು ಕೆಲಸವನ್ನ ಮುಂದುವರೆಸುತ್ತಿದ್ರು. ಆದ್ರೆ ಕೊರೊನಾ ಲಾಕ್‌ಡೌನ್ ನಡುವೆ ಗುತ್ತಿಗೆ ಅವಧಿ ಮುಗಿದ ಬಳಿಕ ಏಕಾಏಕಿ ಕೆಲಸದಿಂದ ತೆಗೆದು ಹಾಕಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದರಿಂದಾಗಿ ಸುಮಾರು 68 ಕಾರ್ಮಿಕರ ಕುಟುಂಬಗಳಿಗೆ ತೊಂದರೆಯಾಗಿದ್ದು, ನಮ್ಮನ್ನು ಬೀದಿಪಾಲು ಮಾಡಿದ್ದಾರೆ ಎಂದು ದೂರಿದ್ದು, ಕಳೆದ ಹತ್ತು ವರ್ಷಗಳಿಂದ ಕೆಲಸ ನಿರ್ವಹಿಸುತ್ತಿರುವ ನಮಗೆ ಮರಳಿ ಕೆಲಸ ನೀಡಬೇಕು ಎಂದು ಒತ್ತಾಯಿಸಿದರು.