ರಾಯಚೂರು: ನಾರಾಯಣಪುರ ಜಲಾಶಯದಿಂದ ಕೃಷ್ಣಾ ನದಿಗೆ 2.55 ಲಕ್ಷ ಕ್ಯೂಸೆಕ್ ನೀರು ಹರಿಬಿಟ್ಟ ಪರಿಣಾಮ ಜಿಲ್ಲಾಡಳಿತದಿಂದ ಮುಂಜಾಗೃತ ಕ್ರಮವಾಗಿ ನಡುಗಡ್ಡೆಯ ಜನರನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಲಾಗಿದೆ. ತಾಲೂಕಿನ ನಡುಗಡ್ಡೆ ಪ್ರದೇಶಗಳಾದ ಕುರುವಕುರ್ಧ, ಕುರುವಕಲ ಗ್ರಾಮದ ನಿವಾಸಿಗಳನ್ನು ಡಿ.ರಾಂಪುರ ಗ್ರಾಮಕ್ಕೆ ಸ್ಥಳಾಂತರ ಮಾಡಲಾಗಿದೆ.
ಪ್ರವಾಹ ಭೀತಿಯಿರುವ ಸ್ಥಳಗಳಿಗೆ ರಾಷ್ಟ್ರೀಯ ವಿಪತ್ತು ನಿರ್ಹವಣಾ ಕಾರ್ಯಪಡೆ(ಎನ್ಡಿಆರ್ಎಫ್) ತಂಡ ಭೇಟಿ ನೀಡಿ ಪರಿಶೀಲಿಸಿದೆ. ನೀರಿನ ಮಟ್ಟ ಹೆಚ್ಚಾದಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಕುರಿತು ಇದೇ ವೇಳೆ ಚರ್ಚೆ ನಡೆಸಿದರು.
ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಎನ್ಡಿಆರ್ಎಫ್ ತಂಡದ ಮುಂದಾಳತ್ವ ವಹಿಸಿರುವ ಮಹೇಶ್ ಪರಿಕ್ ಮಾತನಾಡಿ, ಆಂಧ್ರದ ಗುಂಟೂರಿನ ಎನ್ಡಿಆರ್ಎಫ್ ನ 10 ಬಟಾಲಿಯನ್ ನಿಂದ 30 ಜನರ ತಂಡಗಳು ಬಂದಿವೆ. ಒಟ್ಟು 4 ಬೋಟ್ಗಳು, ಲೈಫ್ ಜಾಕೆಟ್ಗಳು ಸೇರಿದಂತೆ ರಕ್ಷಣೆಗೆ ಬೇಕಾದ ಅಗತ್ಯ ಸಾಮಗ್ರಿಗಳ ಸಿದ್ಧವಾಗಿಟ್ಟುಕೊಂಡಿದ್ದೇವೆ. ತ್ವರಿತವಾಗಿ ರಕ್ಷಣಾ ಕಾರ್ಯ ಕೈಗೊಳ್ಳಲು ತಂಡ ಸನ್ನದ್ಧವಾಗಿದೆ. ಈಗ ಹರಿಯುತ್ತಿರುವ ನೀರಿನಿಂದ ಯಾವುದೇ ತೊಂದರೆಯಿಲ್ಲ. ಹೆಚ್ಚುವರಿಯಾಗಿ ನೀರು ಹರಿದು ಬಂದರೆ ತೊಂದರೆ ಆಗಬಹುದು. ಸಮರ್ಪಕವಾಗಿ ಪರಿಸ್ಥಿತಿ ಎದುರಿಸಲು ತಂಡ ಸಿದ್ಧವಿದೆ ಎಂದು ತಿಳಿಸಿದರು.
ರಾಯಚೂರು ತಹಶಿಲ್ದಾರ್ ಹಂಪಣ್ಣ ಹಾಗೂ ಸಿಬ್ಬಂದಿ ಪರಿಶೀಲನಾ ಕಾರ್ಯದಲ್ಲಿ ಭಾಗಿಯಾಗಿದ್ದರು.