ರಾಯಚೂರು: ರೈತರ ಬೆಳೆಗಳು ಕಟಾವಾಗಿ ಮಾರುಕಟ್ಟೆಗೆ ಬರುತ್ತಿದ್ದು, ಬೆಂಬಲ ಬೆಲೆಯಲ್ಲಿ ರೈತರ ಫಸಲು ಖರೀದಿಸಲು ಒಂದು ತಿಂಗಳು ನೋಂದಣಿ ಕೇಂದ್ರ ಆರಂಭಿಸಲು ಕ್ರಮಕೈಗೊಳ್ಳಲಾಗಿವುದು ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದರು.
ನಗರದ ಪೊಲೀಸ್ ಪರೇಡ್ ಮೈದಾನದಲ್ಲಿ ಕರ್ನಾಟಕ ರಾಜೋತ್ಸವದ ಅಂಗವಾಗಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಕಳೆದ 22ರಂದು ನಡೆದ ಸಚಿವ ಸಂಪುಟ ಉಪ ಸಮಿತಿ ಸಭೆಯಲ್ಲಿ ಭತ್ತ, ಶೇಂಗಾ, ಕೊಬ್ಬರಿ, ಉದ್ದು, ಹೆಸರು, ತೊಗರಿ ಬೆಳೆಗಳನ್ನು ಬೆಂಬಲ ಬೆಲೆಯಲ್ಲಿ ಖರೀದಿಸಲು, ಈ ಒಂದು ತಿಂಗಳು ನೋಂದಣಿ ಕೇಂದ್ರದ ಮೂಲಕ ನೋಂದಣಿ ಕಾರ್ಯ ನಡೆಯಲಿದ್ದು, ರೈತರ ಬೆಳೆಗಳನ್ನು ಬೆಂಬಲ ಬೆಲೆಯಲ್ಲಿ ಖರೀದಿಸಲಾಗುವುದು.
ಕೇಂದ್ರ ಸರ್ಕಾರದ ಬೆಂಬಲ ಬೆಲೆಯಲ್ಲಿ ಖರೀದಿ ನಡೆಯಲಿದ್ದು, ಹೆಚ್ಚುವರಿ ಬೆಲೆ ನೀಡುವ ಕುರಿತು ರಾಜ್ಯ ಸರ್ಕಾರದ ಮುಂದೆ ಯಾವುದೇ ಪ್ರಸ್ತಾವನೆ ಇಲ್ಲ. ನೋಂದಣಿ ಕಾರ್ಯ ಆರಂಭವಾಗುತ್ತಿದ್ದಂತೆ ಮಾರುಕಟ್ಟೆಯಲ್ಲಿ ಬೆಲೆ ಹೆಚ್ಚಲಿದೆ.
ಕೃಷ್ಣಾ ನದಿ ಪ್ರವಾಹಕ್ಕೆ ಒಳಗಾದ ತಾಲೂಕಿನ ಮೂರು ಗ್ರಾಮಗಳ ಸ್ಥಳಾಂತರಕ್ಕೆ ಜಿಲ್ಲಾಡಳಿತಕ್ಕೆ ಸೂಚಿಸಿದ್ದು, ಪ್ರಕ್ರಿಯೆ ನಡೆಯುತ್ತಿದೆ. ಮುಖಂಡ ಯತ್ನಾಳ ಅವರು ಪಕ್ಷದ ಮುಖಂಡರ ಕುರಿತು ಯಾರು ಹಗುರವಾಗಿ ಮಾತನಾಡಬಾರದು, ಮಾತನಾಡುವುದು ತಪ್ಪು, ಪಕ್ಷದ ಶಿಸ್ತಿನ ಚೌಕಟ್ಟು ಮೀರಬಾರದು, ಮಾತನಾಡಿದವರು ಯಾರೆ ಆಗಲಿ ಪಕ್ಷದ ಮುಖಂಡರು ಕ್ರಮ ಕೈಗೊಳ್ಳಲಿದ್ದಾರೆ ಎಂದರು.