ರಾಯಚೂರು: ಜಿಲ್ಲೆಯ ಲಿಂಗಸುಗೂರು ತಾಲೂಕಿನ ರೈತರ ಜೀವನಾಡಿ ರಾಂಪೂರ ಏತ ನೀರಾವರಿ ಕ್ಲೋಸರ್ ವರ್ಕ್ಸ್ ಹೆಸರಲ್ಲಿ ಹಣ ದುರ್ಬಳಕೆ ಮಾಡಲಾಗುತ್ತಿದೆ ಎಂದು ರೈತ ಪರ ಸಂಘಟನೆಗಳು ಆರೋಪಿಸಿವೆ.
ಪ್ರತಿ ವರ್ಷ ಮೇ, ಜೂನ್ ತಿಂಗಳಲ್ಲಿ ಕಾಲುವೆಗಳಿಗೆ ನೀರು ಹರಿಸುವುದು ಸ್ಥಗಿತಗೊಳಿಸಿದ ಅವಧಿಯಲ್ಲಿ ಕಾಲುವೆಗಳ ದುರಸ್ತಿ, ಹೂಳು ತೆಗೆಯುವ ಹಾಗೂ ಸ್ವಚ್ಛಗೊಳಿಸಿ ರೈತರ ಜಮೀನಿಗೆ ನೀರು ಸಮರ್ಪಕವಾಗಿ ಹರಿಸುವುದು ವಾಡಿಕೆ. ಆದರೆ ನವಲಿ ಒಂದನೇ ಜಾಕವೆಲ್ ದಿಂದ ಆನೆಹೊಸೂರು ಜಾಕವೆಲ್ ವರೆಗಿನ ಸಂಪರ್ಕ ಮುಖ್ಯ ನಾಲೆ, ಪೂರ್ವ ಮತ್ತು ಪಶ್ಚಿಮ ಮುಖ್ಯನಾಲೆಗಳು ಸೇರಿದಂತೆ ವಿತರಣಾ ಮತ್ತು ಲ್ಯಾಟರಲ್ಗಳ ದುರಸ್ತಿ ಮತ್ತು ಸ್ವಚ್ಛತೆ ನೆನೆಗುದಿಗೆ ಬಿದ್ದಿವೆ. ಅಲ್ಲದೆ ಮಾಡಿರುವ ಕೆಲಸ ಅಪೂರ್ಣಗೊಂಡಿದ್ದು ರೈತರ ಆಕ್ರೋಶಕ್ಕೆ ಎಡೆಮಾಡಿಕೊಟ್ಟಿದೆ.
ಲಿಂಗಸುಗೂರಿಗೆ ಕುಡಿವ ನೀರು, ಕೆರೆಗೆ ನೀರು ಹರಿಸುವ ನೆಪ ಮುಂದಿಟ್ಟುಕೊಂಡು ಈ ಬಾರಿ ಮುಖ್ಯನಾಲೆ ದುರಸ್ತಿ ಮತ್ತು ಹೂಳು ತೆಗೆಯುವ ಕಾರ್ಯ ಸ್ಥಗಿತಗೊಂಡಿವೆ. ಇದನ್ನೇ ಬಂಡವಾಳ ಮಾಡಿಕೊಂಡ ಗುತ್ತಿಗೆದಾರ, ಎಂಜಿನಿಯರ್ ಹಣ ದುರ್ಬಳಕೆ ಮಾಡಿಕೊಂಡಿದ್ದು ತನಿಖೆ ನಡೆಸುವಂತೆ ರೈತರು ಒತ್ತಾಯಿಸಿದ್ದಾರೆ.
ರೈತ ಮುಖಂಡ ಮುದಕಪ್ಪ ನೀರಲಕೇರಿ ಮಾತನಾಡಿ, ವಿತರಣಾ ಮತ್ತು ಲ್ಯಾಟರ್ಗಳ ದುರಸ್ತಿ ಮಾಡಿಲ್ಲ. ಹೂಳು, ಗಿಡಗಂಟಿ ಕೂಡ ತೆಗೆಯದೆ ಲಕ್ಷಾಂತರ ಹಣ ದುರ್ಬಳಕೆ ಮಾಡಿಕೊಳ್ಳುತ್ತಿದ್ದು, ಸಂಬಂಧಿಸಿದ ಅಧಿಕಾರಿಗಳು ಪರಿಶೀಲನೆ ನಡೆಸಿ ಕ್ರಮ ಕೈಗೊಂಡು ರೈತರ ಜಮೀನಿಗೆ ಸಮರ್ಪಕ ನೀರು ಹರಿಸಬೇಕು ಎಂದು ಮನವಿ ಮಾಡಿದ್ದಾರೆ.