ರಾಯಚೂರು: ಜಿಲ್ಲೆಯ ಹಿಂದೂಸ್ತಾನಿ ಗಾಯಕ ಅಂಬಯ್ಯ ನುಲಿ 2020ರ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಅಂಬಯ್ಯ ನುಲಿ ಅವರು ಕಲ್ಯಾಣ ಕರ್ನಾಟಕ ಭಾಗದಲ್ಲಿ 31 ವರ್ಷಗಳ ಕಾಲ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಇದೀಗ ಹೊಂದಿದ್ದಾರೆ. ಜೊತೆಗೆ ಸುಮಾರು 40 ವರ್ಷಗಳಿಂದ ಇವರು ಸಂಗೀತ ಕ್ಷೇತ್ರದಲ್ಲೂ ಸೇವೆ ಸಲ್ಲಿಸುತ್ತಿದ್ದಾರೆ. ಹಿಂದೂಸ್ತಾನಿ ಗಾಯಕರಾಗಿರುವ ಅಂಬಯ್ಯನವರು ಶರಣರ ವಚನಗಳು, ದಾಸರ ಕೀರ್ತನೆಗಳು ಹಾಗೂ ಭಾವಗೀತೆಗಳನ್ನು ಸುಮಧುರವಾಗಿ ಹಾಡಬಲ್ಲರು. ಇವರ ಕಂಠಸಿರಿಯಿಂದ 185ಕ್ಕೂ ಹೆಚ್ಚು ಕ್ಯಾಸೆಟ್ಗಳು, 1,500ಕ್ಕೂ ಹೆಚ್ಚು ಗೀತೆಗಳಿಗೆ ರಾಗ ಸಂಯೋಜನೆ ಮಾಡಿದ್ದು, ಧ್ವನಿಸುರುಳಿ ಮೂಲಕ ಹೊರಬಂದಿವೆ. ಹವ್ಯಾಸಿ ರಂಗಭೂಮಿಗೆ ಗೀತೆ ರಚನೆ, ಗಾಯನ, ಸಂಗೀತ ನಿರ್ದೇಶನ ಮಾಡಿದ್ದಾರೆ.
ನಾಡಿನ ಹೆಸರಾಂತ ಗಾಯಕ, ಗಾಯಕಿಯರೊಂದಿಗೆ ಸಂಗೀತ ಸಂಯೋಜನೆ ಮಾಡಿದ್ದು, ಸ್ವರ ಸಾಮ್ರಾಟ ಗಾಯಕರಾದ ಎಸ್.ಬಿ.ಬಾಲಸುಬ್ರಹ್ಮಣ್ಯ ನಡೆಸಿಕೊಟ್ಟಿರುವ 'ಎದೆ ತುಂಬಿ ಹಾಡುವೇನು' ಸಂಗೀತ ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.
ಅಂಬಯ್ಯನವರ ತಾತ ಮಹಾದೇವಯ್ಯ ನುಲಿ, ಶರಣರ ಗಮಕಿ ಹಾಗೂ ತತ್ವಪದ ಗಾಯಕರಾಗಿದ್ದರೆ ಅವರ ತಂದೆ ಮಹಾದೇವಯ್ಯ ನುಲಿಯವರು ಗುಬ್ಬಿ ವೀರಣ್ಣ ನಾಟಕ ಕಂಪನಿಯಲ್ಲಿ ಸಂಗೀತ ನಿರ್ದೇಶಕರು ಹಾಗೂ ಗಾಯಕರಾಗಿದ್ದರು. ತಾಯಿ ತತ್ವಪದ ಗಾಯಕಿಯಾಗಿದ್ದರು. ನಾರಾಯಣ ಢಗೆ ಇವರ ಸಂಗೀತ ಗುರುಗಳಾಗಿದ್ದಾರೆ.
ಇವರು ಸಂಗೀತ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ಉತ್ತಮ ಶಿಕ್ಷಕ ಪ್ರಶಸ್ತಿ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ನಿಂದ ನೀಡುವ ರಮಣ ಶ್ರೀ ಪ್ರಶಸ್ತಿ, ಹೊಂಬಾಳೆ ಪ್ರತಿಭಾರಂಗದಿಂದ ಸ್ವರಮಂದಾರ ಪ್ರಶಸ್ತಿ ಹಾಗು ಗಾನಕೋಗಿಲೆ ಪ್ರಶಸ್ತಿ ಸೇರಿದಂತೆ ನಾನಾ ಪ್ರಶಸ್ತಿಗಳು ಸಂದಿವೆ.